ರಾಜ್ಯದಲ್ಲಿ ಯಾವುದೇ ರೈತರ ಆತ್ಮಹತ್ಯೆ ಪ್ರಕರಣ ದಾಖಲಾಗಿಲ್ಲ: ಮಮತಾ ಬ್ಯಾನರ್ಜಿ
ಕೋಲ್ಕತಾ, ಜು.28: ದೇಶದಾದ್ಯಂತ 12,000ಕ್ಕೂ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಪಶ್ಚಿಮ ಬಂಗಾಳದಲ್ಲಿ ಇಂತಹ ಒಂದೂ ಪ್ರಕರಣ ದಾಖಲಾಗಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರ ನೆರವಿಗಾಗಿ ಪಶ್ಚಿಮ ಬಂಗಾಳ ಸರಕಾರ ಗರಿಷ್ಟ ಯೋಜನೆಗಳನ್ನು ಜಾರಿಗೊಳಿಸಿದೆ. ನೆರೆಯಿಂದಾಗಿ ಬೆಳೆ ನಷ್ಟವಾದಾಗ ರೈತರ ತೆರಿಗೆಯನ್ನು ಮನ್ನಾ ಮಾಡಿದ್ದೇವೆ. ರೈತರಿಗೆ ಹಲವಾರು ಸಬ್ಸಿಡಿಗಳನ್ನು ನೀಡಿದ್ದೇವೆ. ಆದರೆ ಕೇಂದ್ರ ಸರಕಾರ ವಾಸ್ತವಿಕತೆಯನ್ನು ಮರೆಮಾಚಿ ತಪ್ಪು ಮಾಹಿತಿಯನ್ನು ನೀಡುತ್ತಿದೆ ಎಂದು ಹೇಳಿದರು.
ಇತ್ತೀಚೆಗೆ ಪಶ್ಚಿಮ ಬಂಗಾಳದ ಮಿಡ್ನಾಪೋರ್‌ನಲ್ಲಿ ಬಿಜೆಪಿ ನೇತೃತ್ವದಲ್ಲಿ ನಡೆದಿದ್ದ ರೈತರ ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳದಲ್ಲಿ ರೈತರು ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದಾರೆ. ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಬೇಕಿದ್ದರೆ ರೈತರು ಟಿಎಂಸಿ ಕೃಪಾಪೋಷಿತ ಮಧ್ಯವರ್ತಿ ಕೂಟದ ಅನುಮತಿ ಪಡೆಯುವ ಪರಿಸ್ಥಿತಿಯಿದೆ ಎಂದು ಟೀಕಿಸಿದ್ದರು.
ಪ್ರಧಾನಿಯವರ ಟೀಕೆಗೆ ಇದೀಗ ಉತ್ತರಿಸಿರುವ ಮಮತಾ ಬ್ಯಾನರ್ಜಿ ರಾಜ್ಯ ಸರಕಾರ ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ ಎಂದಿದ್ದಾರೆ. ಅಲ್ಲದೆ ಮೋದಿ ಪಾಲ್ಗೊಂಡಿದ್ದ ಜುಲೈ 16ರ ರೈತರ ರ್ಯಾಲಿ ನಡೆದ ಸ್ಥಳವಾದ ಮಿಡ್ನಾಪೋರ್ ಕಾಲೇಜು ಮೈದಾನದಲ್ಲೇ ಟಿಎಂಸಿ ಆಗಸ್ಟ್ 9ರಂದು ರ್ಯಾಲಿ ನಡೆಸುವ ಬಗ್ಗೆಯೂ ಅವರು ಸೂಚನೆ ನೀಡಿದ್ದಾರೆ. ಈ ಮಧ್ಯೆ, ಮಮತಾ ಬ್ಯಾನರ್ಜಿ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಯಂತನ್ ಬಸು, ರಾಜ್ಯದಲ್ಲಿ 32 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಈ ವರ್ಷದ ಫೆಬ್ರವರಿಯಲ್ಲಿ ವರದಿಯಾಗಿದೆ. ಯಾವುದೇ ಸಹಕಾರಿ ಬ್ಯಾಂಕ್‌ಗಳು ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡಬಾರದು ಎಂದು ಮುಖ್ಯಮಂತ್ರಿ ಆದೇಶ ನೀಡಿದ್ದು ಇದು ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ದುಸ್ಥಿತಿಗೆ ಸಾಕ್ಷಿಯಾಗಿದೆ. ಅಲ್ಲದೆ ರಾಜ್ಯದಲ್ಲಿ ಕಾಲೇಜು ದಾಖಲಾತಿ ಪ್ರಕ್ರಿಯೆಯ ಸಂದರ್ಭದ ಭ್ರಷ್ಟಾಚಾರದಿಂದಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆಯೂ ಪ್ರಧಾನಿ ಉಲ್ಲೇಖಿಸಿದ್ದರು. ಇದಕ್ಕೆ ಮಮತಾ ಯಾಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಮಮತಾ ಹೇಳಿಕೆ ಸರಿಯಲ್ಲ. ಅವರು ಸತ್ಯವನ್ನು ಸುಳ್ಳಿನಿಂದ ಮರೆಮಾಚುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸಿಪಿಎಂ ಮುಖಂಡ ಸುಜನ್ ಚಕ್ರವರ್ತಿ ಹೇಳಿದ್ದಾರೆ.