ಜಾರ್ಖಂಡ್‌ನಲ್ಲಿ ಅಪೌಷ್ಠಿಕತೆಯಿಂದ ವ್ಯಕ್ತಿ ಸಾವು

Update: 2018-07-28 16:33 GMT

ಹೊಸದಿಲ್ಲಿ, ಜು.28: ಅಪೌಷ್ಠಿಕತೆ ಮತ್ತು ಅನಾರೋಗ್ಯದಿಂದ ಜುಲೈ 24ರಂದು 39ರ ಹರೆಯದ ವ್ಯಕ್ತಿಯೊಬ್ಬರು ಮೃತಪಡ್ಡಿದ್ದು, ಜಾರ್ಖಂಡ್‌ನಲ್ಲಿ ಆಧಾರ್ ಜೋಡಣೆ ಮಾಡಿಲ್ಲ ಎಂಬ ಕಾರಣಕ್ಕೆ ರೇಶನ್ ನೀಡದ ಪರಿಣಾಮ ಕಳೆದ ಒಂಬತ್ತು ತಿಂಗಳಲ್ಲಿ ಹಸಿವು ಅಥವಾ ಅಪೌಷ್ಠಿಕತೆಯಿಂದ ಮೃತಪಟ್ಟವರ ಸಂಖ್ಯೆ 13ಕ್ಕೇರಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮೃತಪಟ್ಟ ವ್ಯಕ್ತಿಯನ್ನು ಜಾರ್ಖಂಡ್‌ನ ರಾಮಗಡ ಜಿಲ್ಲೆಯ ಮಂಡು ಬ್ಲಾಕ್‌ನ ಚೈನ್‌ಪುರ ನಿವಾಸಿ ರಾಜೇಂದ್ರ ಬಿರೋರ್ ಎಂದು ಗುರುತಿಸಲಾಗಿದೆ. ಇವರು ಸೂಕ್ಷ್ಮ ಬುಡಕಟ್ಟು ಸಮುದಾಯಕ್ಕೆ (ಪಿವಿಟಿ) ಸೇರಿದವರಾಗಿದ್ದರು. ರಾಜೇಂದ್ರ ಅವರ ಕುಟುಂಬ ಆಧಾರ್ ಕಾರ್ಡ್ ಹೊಂದಿಲ್ಲ ಎಂಬ ಕಾರಣಕ್ಕೆ ಅವರನ್ನು ಸಾರ್ವಜನಿಕ ಹಂಚಿಕಾ ವ್ಯವಸ್ಥೆಯಿಂದ ಹೊರಗಿಡಲಾಗಿತ್ತು ಎಂದು ವರದಿಗಳು ತಿಳಿಸಿವೆ. ಜನರ ಚಳವಳಿಗಳ ರಾಷ್ಟ್ರೀಯ ಮೈತ್ರಿಯ ಆಹಾರದ ಹಕ್ಕು ಅಭಿಯಾನದ ಸದಸ್ಯರು ಪರಿಶೀಲನೆ ನಡೆಸಿದಾಗ ರಾಜೇಂದ್ರ ಅವರ ಕುಟುಂಬವನ್ನು 2013ರ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಿಂದ ಹೊರಗಿಡಲಾಗಿರುವುದು ಪತ್ತೆಯಾಗಿದೆ.

ಈ ಕುಟುಂಬದ ಬಳಿ ಆಧಾರ್ ಕಾರ್ಡ್ ಇಲ್ಲದಿರುವುದೇ ಅವರನ್ನು ಕಾಯ್ದೆಯಿಂದ ಹೊರಗಿಡಲು ಕಾರಣ ಎಂದು ಬ್ಲಾಕ್ ಅಭಿವೃದ್ಧಿ ಅಧಿಕಾರಿ ತಿಳಿಸಿರುವುದಾಗಿ ಅಭಿಯಾನದ ಸದಸ್ಯರು ಆರೋಪಿಸಿದ್ದಾರೆ. ಅಂತ್ಯೋದಯ ಕಾರ್ಡ್‌ಗಳನ್ನು ಹೊಂದಿರುವ ಸೂಕ್ಷ್ಮ ಬುಡಕಟ್ಟು ಸಮುದಾಯಗಳಿಗೆ ಮಾಸಿಕ 35 ಕೆ.ಜಿ ಆಹಾರಧಾನ್ಯ ಉಚಿತವಾಗಿ ವರ ಮನೆಯ ಬಾಗಿಲಿಗೆ ತಲುಪಿಸಬೇಕೆಂದು ಸರ್ವೋಚ್ಚ ನ್ಯಾಯಾಲಯದ ಆದೇಶ ಹೇಳುತ್ತದೆ. ಆದರೆ ಅಧಿಕಾರಿಗಳನ್ನು ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಮತ್ತು ಆಹಾರಧಾನ್ಯ ಪಡೆಯಲು ಆಧಾರ್ ಕಡ್ಡಾಯಗೊಳಿಸಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದಾರೆ.

ಬಲಹೀನತೆಯಿಂದಾಗಿ ರಾಜೇಂದ್ರ ಅವರು ಒಂದು ವರ್ಷದ ಹಿಂದೆ ಕೆಲಸ ಮಾಡುವುದನ್ನು ನಿಲ್ಲಿಸಿದ್ದರು. ಅವರ ಪತ್ನಿ ವಾರದಲ್ಲಿ ಎರಡು, ಮೂರು ದಿನ ದುಡಿದ ಹಣದಲ್ಲಿ ಪತಿ, ಪತ್ನಿ ಮತ್ತು ಆರು ಮಕ್ಕಳ ಜೀವನ ಸಾಗಬೇಕಿತ್ತು. ಕಳೆದ ಒಂದು ವರ್ಷದಿಂದ ಇಡೀ ಕುಟುಂಬ ಅರೆಹೊಟ್ಟೆಯಲ್ಲೇ ಬದುಕುತ್ತಿದೆ ಎಂದು ಅವರು ತಿಳಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡ ರಾಜೇಂದ್ರ ಅವರನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ದಾಖಲಿಸಲಾಗಿತ್ತು. ಆದರೆ ಅಲ್ಲಿನ ವೈದ್ಯರು ರಾಂಚಿಯಲ್ಲಿರುವ ಆಸ್ಪತ್ರೆಗೆ ಕೊಂಡೊಯ್ಯುವಂತೆ ಸೂಚಿಸಿದ್ದಾರೆ. ಆಮೂಲಕ ರಾಜೇಂದ್ರಗೆ ಪ್ರಾಥಮಿಕ ಚಿಕಿತ್ಸೆಯನ್ನೂ ನೀಡದೆ ನಿರ್ಲಕ್ಷವಹಿಸಿದ್ದಾರೆ ಎಂದು ಹಕ್ಕುಗಳ ಹೋರಾಟಗಾರರು ಆರೋಪಿಸಿದ್ದಾರೆ.

 ಕಳೆದ ಒಂಬತ್ತು ತಿಂಗಳಲ್ಲಿ ಜಾರ್ಖಂಡ್‌ನಲ್ಲಿ ಹದಿಮೂರು ಮಂದಿ ಅಪೌಷ್ಠಿಕತೆಯಿಂದ ಸಾವನ್ನಪ್ಪಿದ್ದಾರೆ. ಈ ಪೈಕಿ ಕನಿಷ್ಟ ಏಳು ಮಂದಿ ಆಧಾರ್ ಸಂಬಂಧಿ ವೈಫಲ್ಯಗಳ ಕಾರಣದಿಂದ ಆಹಾರಧಾನು ಪಡೆಯದ ಪರಿಣಾಮ ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News