×
Ad

ಇಸ್ರೇಲ್‌ ಪ್ರಧಾನಿಯನ್ನು ಹಂದಿಯಂತೆ ಚಿತ್ರಿಸಿದ ವ್ಯಂಗ್ಯಚಿತ್ರಕಾರ ಕೆಲಸದಿಂದ ವಜಾ

Update: 2018-07-28 22:37 IST

ಜೆರುಸಲೇಂ, ಜು.28: ದೇಶದ ನೂತನ ಯಹೂದಿ ರಾಷ್ಟ್ರ ಸರಕಾರ (ಜೂಯಿಶ್ ನೇಶನ್ ಸ್ಟೇಟ್) ಕಾನೂನನ್ನು ವಿರೋಧಿಸಿ ರಾಜಕಾರಣಿಗಳನ್ನು ಹಂದಿಗಳಂತೆ ಚಿತ್ರಿಸಿದ ವ್ಯಂಗ್ಯಚಿತ್ರಗಾರನನ್ನು ಇಸ್ರೇಲಿ ಪತ್ರಿಕೆ ಕೆಲಸದಿಂದ ವಜಾಗೊಳಿಸಿದೆ.

ಇಸ್ರೇಲ್‌ನ ಪ್ರಮುಖ ಪತ್ರಿಕೆ ಜೆರುಸಲೇಂ ಪೋಸ್ಟ್ ವ್ಯಂಗ್ಯಚಿತ್ರಗಾರ ಅವಿ ಕರ್ಟ್ಜ್‌ರನ್ನು ವಜಾಗೊಳಿಸಿದೆ. ಸರಕಾರದ ನೂತನ ಕಾನೂನನ್ನು ವಿರೋಧಿಸಿರುವ ಅವಿ, ತಮ್ಮ ವ್ಯಂಗ್ಯಚಿತ್ರದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ಇತರ ರಾಜಕಾರಣಿಗಳನ್ನು ಬಟ್ಟೆ ಧರಿಸಿದ ಹಂದಿಗಳಂತೆ ಚಿತ್ರಿಸಿದ್ದರು. ಜೊತೆಗೆ ಜಾರ್ಜ್ ಓರ್ವೆಲ್ ಅವರ ಸರ್ವಾಧಿಕಾರಿ ವಿಡಂಬನೆ ಅನಿಮಲ್ ಫಾರ್ಮ್‌ನಲ್ಲಿ ಉಲ್ಲೇಖಿಸಲಾಗಿದ್ದ, “ಎಲ್ಲ ಪ್ರಾಣಿಗಳು ಸಮಾನ, ಆದರೆ ಕೆಲವೊಂದು ಪ್ರಾಣಿಗಳು ಇತರರಿಗಿಂತ ಹೆಚ್ಚು ಸಮಾನವಾಗಿರುತ್ತವೆ” ಎಂಬ ವಾಕ್ಯವನ್ನು ಹಾಕಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವಿ, “ನನ್ನನ್ನು ವಜಾಗೊಳಿಸಿರುವುದು ಮೂರ್ಖತನ. ನನ್ನ ವ್ಯಂಗ್ಯಚಿತ್ರ ಅಷ್ಟೊಂದು ತೀಕ್ಷ್ಣವಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಈ ವ್ಯಂಗ್ಯಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿ, ಯಹೂದಿ ಧರ್ಮದಲ್ಲಿ ಹಂದಿಗಳನ್ನು ಕೊಳಕು ಎಂದು ಭಾವಿಸಲಾಗುತ್ತದೆ ಎಂಬುದನ್ನು ಕೆಲವರು ಬೆಟ್ಟು ಮಾಡಿದ್ದರು. ಇಸ್ರೇಲ್‌ನ ನೂತನ ಕಾನೂನು, ಇಸ್ರೇಲನ್ನು ಯಹೂದಿಗಳ ರಾಷ್ಟ್ರೀಯ ನೆಲೆಯಾಗಿ ಗುರುತಿಸುತ್ತದೆ. ಆಮೂಲಕ ಯಹೂದಿಗಳಿಗೆ ದೇಶದ ಮೇಲೆ ಪರಮ ಅಧಿಕಾರವನ್ನು ನೀಡುತ್ತದೆ ಮತ್ತು ಅರಬ್ ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸುತ್ತದೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News