ಅಕ್ವೇರಿಯಂನಂತಾದ ಸರಕಾರಿ ಆಸ್ಪತ್ರೆಯ ಐಸಿಯು!
ಪಾಟ್ನಾ, ಜು. 29: ಪಾಟ್ನಾದ ಎರಡನೇ ಅತಿ ದೊಡ್ಡ ಆಸ್ಪತ್ರೆ ಎಂದು ಪರಿಗಣಿಸಲಾದ ನಲಂದಾ ವೈದ್ಯಕೀಯ ಕಾಲೇಜು ಆಸ್ಪತ್ರೆ ಭಾರೀ ಮಳೆಯಿಂದ ಜಲಾವೃತವಾಗಿದೆ. ಚಿಕಿತ್ಸೆಗಾಗಿ ಪೂರ್ವ ಬಿಹಾರದಿಂದ ದೊಡ್ಡ ಸಂಖ್ಯೆಯ ರೋಗಿಗಳು ಆಗಮಿಸುವ ಈ ಆಸ್ಪತ್ರೆಯ ಕೊಠಡಿ ಹಾಗೂ ಕಾರಿಡಾರ್‌ಗಳಲ್ಲಿ ನೀರು ತುಂಬಿಕೊಂಡಿದೆ. ತೀವ್ರ ನಿಗಾ ಘಟಕ ತುಂಬಾ ಸ್ವಚ್ಛವಾಗಿರುವುದು ಮುಖ್ಯ. ಆದರೆ, ಇಲ್ಲೂ ನೀರು ತುಂಬಿಕೊಂಡಿದೆ.
ರೋಗಿಗಳು ಬೆಡ್ ಮೇಲೆ ಮಲಗಿರುವಾಗ ಕೆಳಗೆ ನೀರಿನಲ್ಲಿ ಮೀನುಗಳು ಈಜಾಡುತ್ತಿವೆ. ಸರಕಾರಿ ಆಸ್ಪತ್ರೆಯ ಈ ದುಸ್ಥಿತಿ ಬಗ್ಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಇದು ವರುಣನ ಆರ್ಭಟ ಎಂದು ಜೆಡಿ (ಯು) ಘೋಷಿಸದು ಎಂದು ಭಾವಿಸೋಣ. ಆದಾಗ್ಯೂ, ಇಂದ್ರ ಕಳೆದ 14 ವರ್ಷಗಳ ಸರಕಾರದ ತಪ್ಪು ನೀತಿಯನ್ನು ಬೆಳಕಿಗೆ ತಂದಿದ್ದಾನೆ” ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.
‘‘ಬಿಹಾರದ ಎರಡನೇ ಅತಿ ದೊಡ್ಡ ಆಸ್ಪತ್ರೆಯಾದ ನಲಂದಾ ವೈದ್ಯಕೀಯ ಕಾಲೇಜು ಆಸ್ಪತ್ರೆ ಚರಂಡಿ ನೀರಿನಿಂದ ತುಂಬಿ ಅಕ್ವೇರಿಯಂ ಆಗಿ ಮಾರ್ಪಟ್ಟಿದೆ’’ ತೇಜಸ್ವಿ ಯಾದವ್, ಆರ್‌ಜೆಡಿ ನಾಯಕ