×
Ad

ಡೋಕಾ ಲಾದಲ್ಲಿ ಚೀನಾ ಸೇನೆಯ ಬಿರುಸಿನ ಚಟುವಟಿಕೆ ಎಂಬ ವರದಿ ತಳ್ಳಿಹಾಕಿದ ಭಾರತ

Update: 2018-07-29 21:19 IST

ಹೊಸದಿಲ್ಲಿ, ಜು.29: ಚೀನಾದ ಸೇನೆ ಡೋಕಾ ಲಾ ಪ್ರಸ್ಥಭೂಮಿಯಲ್ಲಿ ಚಟುವಟಿಕೆಯನ್ನು ಬಿರುಸುಗೊಳಿಸಿದೆ ಎಂಬ ವರದಿಯನ್ನು ತಳ್ಳಿ ಹಾಕಿರುವ ಭಾರತೀಯ ಸೇನೆಯು, ಇದು ಸೇನೆ ನಡೆಸುತ್ತಿರುವ ದೈನಂದಿನ ಗಸ್ತು ತಿರುಗಾಟದ ಭಾಗವಾಗಿದೆ ಎಂದು ಹೇಳಿದೆ.

ತ್ರಿವಳಿ ರಾಷ್ಟ್ರಗಳ(ಚೀನಾ, ಭಾರತ, ಭೂತಾನ್) ಗಡಿಗಳ ಸಂಗಮ ಸ್ಥಳವಾಗಿರುವ ಡೋಕಾ ಲಾದಲ್ಲಿ ಮೂರೂ ರಾಷ್ಟ್ರಗಳ ಸೇನಾಪಡೆಯ ಉಪಸ್ಥಿತಿಯಿದ್ದು, ಯೋಧರ ತಂಡವನ್ನು ಆಗಿಂದಾಗ್ಗೆ ಬದಲಾಯಿಸಲಾಗುತ್ತದೆ. ಹೀಗೆ ಬದಲಾಯಿಸುವ ಸಂದರ್ಭ ಹೊಸ ತಂಡದ ಸೈನಿಕರು ಹಾಗೂ ಹಳೆಯ ತಂಡದ ಸೈನಿಕರು ಒಟ್ಟು ಸೇರಿದಾಗ ಸೈನಿಕರ ಸಂಖ್ಯೆ ಹೆಚ್ಚಾದಂತೆ ಭಾಸವಾಗುತ್ತದೆ ಎಂದು ಭಾರತೀಯ ಸೇನೆ ವಿವರಿಸಿದೆ.

ಬುಧವಾರ ಅಮೆರಿಕದ ಸಂಸತ್‌ನಲ್ಲಿ ಹೇಳಿಕೆ ನೀಡಿದ್ದ ಸಂಸದೆ ಆ್ಯನ್ ವಾಗ್ನರ್ ಡೋಕಾ ಲಾದಲ್ಲಿ ಚೀನಾದ ಸೇನೆ ತನ್ನ ಚಟುವಟಿಕೆಯನ್ನು ಪುನರಾರಂಭಿಸಿದೆ. ಅಲ್ಲದೆ ಡೋಕಾ ಲಾದಲ್ಲಿ ಚೀನಾದ ಸೇನೆ ಸರಕು ಸಾಗಣೆ ಮತ್ತಿತರ ಯುದ್ಧ ಚಟುವಟಿಕೆಗಳನ್ನು ಬಿರುಸುಗೊಳಿಸಿದೆ ಎಂದಿದ್ದರು. ಕಳೆದ ವರ್ಷದಂತೆಯೇ, ಮುಂಬರುವ ಚಳಿಗಾಲಕ್ಕಾಗಿ ಚೀನಾದ ಸೇನೆ ಈಗಲೇ ಸಿದ್ಧತೆ ಆರಂಭಿಸಿದೆ. ಈ ಭಾಗದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಹಿಮಪಾತ ಆಗುವ ಕಾರಣ ಅಗತ್ಯವಿರುವ ಸರಕುಗಳನ್ನು ಈಗಲೇ ಸಂಗ್ರಹ ಮಾಡಿಡುವ ಸಹಜ ಕ್ರಿಯೆ ಇದಾಗಿದೆ ಎಂದು ಭಾರತದ ಸೇನಾಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಚೀನಾದ ಪಿಎಲ್‌ಎ (ಪೀಪಲ್ಸ್ ಲಿಬರೇಷನ್ ಆರ್ಮಿ) ಡೋಕಾ ಲಾದಲ್ಲಿ ಸುಮಾರು 700 ಸೈನಿಕರನ್ನು ಹೊಂದಿದ್ದು ಘನ ವಾಹನ ಹಾಗೂ ಬರಾಕ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಹೊಂದಿದೆ.

ಆದರೆ ಡೋಕಾ ಲಾದಲ್ಲಿ ಚೀನಾ ಸೇನೆಯು ಭೂಮಿಯಿಂದ ಆಕಾಶಕ್ಕೆ ಉಡಾಯಿಸುವ ಕ್ಷಿಪಣಿ(ಎಸ್-300) ಬಳಸುವ ಅನುಕೂಲತೆ ಹೊಂದಿಲ್ಲ. ಇಲ್ಲಿ ಭಾರತೀಯ ಸೇನೆ ಎತ್ತರದ ಪ್ರದೇಶದಲ್ಲಿರುವ ಕಾರಣ ಭಾರತದ ಸೇನೆಯೊಂದಿಗಿನ ಸಂಘರ್ಷದ ಸಮಯದಲ್ಲಿ ಚೀನಾದ ಪಡೆಗಳು ತೆರೆದ ಬಯಲಿನಲ್ಲಿ ನಿಂತು ಯುದ್ದ ಮಾಡುವ ಪರಿಸ್ಥಿತಿಯಿದೆ ಎಂದು ಭಾರತದ ಅಧಿಕಾರಿಗಳು ತಿಳಿಸಿದ್ದಾರೆ. ಚೀನಾದ ಸೇನೆಯ ಬಳಿ ಇರುವ ಭೂಮಿಯಿಂದ ಆಕಾಶಕ್ಕೆ ಉಡಾಯಿಸುವ ಕ್ಷಿಪಣಿಗಳು ಚೀನಾದ ಭೂಪ್ರದೇಶದ ಒಳಗಡೆ ತುಂಬ ದೂರದಲ್ಲಿರುವ ಯದೋಂಗ್ ಎಂಬಲ್ಲಿದೆ. ಇನ್ನೊಂದೆಡೆ ಚೀನಾದ ಸೇನೆಗೆ ಪ್ರತಿಯಾಗಿ ಭೂತಾನ್‌ನ ರಾಯಲ್ ಭೂತಾನ್ ಸೇನಾಪಡೆಯ ಯೋಧರನ್ನೂ ಇಲ್ಲಿ ಗಮನಾರ್ಹ ಪ್ರಮಾಣದಲ್ಲಿ ನಿಯೋಜಿಸಲಾಗಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ. ಚೀನಾ ಮತ್ತು ಭೂತಾನ್ ನಡುವೆ ಡೋಕಾ ಲಾ ಪ್ರದೇಶದಲ್ಲಿ ಗಡಿ ಗುರುತಿನ ಬಗ್ಗೆ ಇರುವ ವಿವಾದವನ್ನು ಶೀಘ್ರ ಬಗೆಹರಿಸಿಕೊಳ್ಳುವಂತೆ ಭೂತಾನ್‌ನ ಮೇಲೆ ಚೀನಾ ನಿರಂತರ ಒತ್ತಡ ಹೇರುತ್ತಿದೆ. ಕಳೆದ ವರ್ಷ ಡೋಕಾ ಲಾದಲ್ಲಿ ಭಾರತದ ಭೂಭಾಗದಲ್ಲಿರುವ ಪ್ರದೇಶದ ಸನಿಹದಲ್ಲಿರುವ ಝಂಪೇರಿ ಪರ್ವತಶ್ರೇಣಿಯನ್ನು ತಲುಪಲು ರಸ್ತೆಯೊಂದನ್ನು ನಿರ್ಮಿಸಲು ಚೀನಾದ ಪಡೆಗಳು ನಡೆಸಿದ ಪ್ರಯತ್ನಕ್ಕೆ ಭಾರತೀಯ ಸೇನೆ ತಡೆಯೊಡ್ಡಿದ್ದು, ಉಭಯ ಸೇನೆಗಳ ನಡುವಿನ ಬಿಕ್ಕಟ್ಟು 73 ದಿನಗಳವರೆಗೆ ಮುಂದುವರಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News