ಬಾಂಗ್ಲಾ ವಲಸಿಗರನ್ನು ಶೂಟ್ ಮಾಡಿಬಿಡಿ: ಬಿಜೆಪಿ ಶಾಸಕ ರಾಜಾಸಿಂಗ್ ವಿವಾದಾಸ್ಪದ ಹೇಳಿಕೆ

Update: 2018-07-31 13:48 GMT

ಹೈದರಾಬಾದ್, ಜು. 31: ರೊಹಿಂಗ್ಯಾಗಳು ಹಾಗೂ ಬಾಂಗ್ಲಾ ವಲಸಿಗರು ಮರ್ಯಾದೆಯಿಂದ ಭಾರತದಿಂದ ಹೊರಹೋಗದಿದ್ದರೆ ಅವರನ್ನು ಶೂಟ್ ಮಾಡಿ ಸಾಯಿಸಬೇಕು . ಆಗ ಮಾತ್ರ ನಮ್ಮ ದೇಶ ಸುರಕ್ಷಿತವಾಗಿರುತ್ತದೆ ಎಂದು ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.

ವಿವಾದಾಸ್ಪದ ಹೇಳಿಕೆಗಳಿಂದಲೇ ಗಮನ ಸೆಳೆಯುತ್ತಿರುವ ಸಿಂಗ್, ಕೆಲ ದಿನಗಳ ಹಿಂದೆ ಗುಂಪು ಹತ್ಯೆ ಪ್ರಕರಣಗಳ ಬಗ್ಗೆ ನೀಡಿದ್ದ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಹಸುಗಳಿಗೆ ರಾಷ್ಟ್ರಮಾತೆ ಎಂಬ ಮಾನ್ಯತೆ ನೀಡುವವರೆಗೆ ಗುಂಪು ಹತ್ಯೆ ಪ್ರಕರಣ ಕೊನೆಗೊಳ್ಳದು. ಗೋರಕ್ಷಕರನ್ನು ಜೈಲಿಗೆ ಹಾಕಿ ಅಥವಾ ಅವರತ್ತ ಗುಂಡು ಹಾರಿಸಿ, ಆದರೆ ಹಸುಗಳಿಗೆ ರಾಷ್ಟ್ರಮಾತೆ ಎಂಬ ಮಾನ್ಯತೆ ಸಿಗುವವರೆಗೆ ಗೋರಕ್ಷಕರ ಕಾರ್ಯ ನಿಲ್ಲದು ಎಂದು ಸಿಂಗ್ ಹೇಳಿದ್ದರು.

ಈ ಮಧ್ಯೆ, ಅಸ್ಸಾಂನ ಎನ್‌ಆರ್‌ಸಿ ಕರಡು ಪಟ್ಟಿಯ ವಿಷಯವನ್ನು ಮಂಗಳವಾರ ಲೋಕಸಭೆಯಲ್ಲಿ ಪ್ರಸ್ತಾವಿಸಿದ ವಿಪಕ್ಷಗಳು ನರೇಂದ್ರ ಮೋದಿ ಸರಕಾರವನ್ನು ತೀವ್ರವಾಗಿ ಟೀಕಿಸಿದಾಗ ಭಾರೀ ಗದ್ದಲಕ್ಕೆ ಕಾರಣವಾಯಿತು. ಶಿವಸೇನೆಯ ಸಂಸದ ಗಣಪತ್ ಸಾವಂತ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕಿರಣ್ ರಿಜಿಜು, ರೊಹಿಂಗ್ಯಾಗಳು ಅಕ್ರಮ ವಲಸಿಗರು ಎಂದು ತಿಳಿಸಿದರು. ಆದರೆ ಸರಕಾರದ ಉತ್ತರದಿಂದ ತೃಪ್ತರಾಗದ ಟಿಎಂಸಿ ಮುಖಂಡ ಸುಗತ ಬೋಸ್, “ನಮ್ಮ ವಿದೇಶ ವ್ಯವಹಾರ ಇಲಾಖೆಯು ಬಾಂಗ್ಲಾದಲ್ಲಿರುವ ರೊಹಿಂಗ್ಯಾರ ಪರ ‘ಆಪರೇಷನ್ ಇನ್ಸಾನಿಯತ್’(ಮಾನವೀಯತೆಯ ಅಭಿಯಾನ) ನಡೆಸುತ್ತದೆ. ಆದರೆ ಭಾರತದಲ್ಲಿ 40 ಸಾವಿರ ರೊಹಿಂಗ್ಯಾಗಳಿದ್ದಾರೆ. ನಮ್ಮ ಮಾನವೀಯತೆಯ ಅಭಿಯಾನ ಬಾಂಗ್ಲಾದಲ್ಲಿರುವ ರೊಹಿಂಗ್ಯಾಗಳಿಗೆ ಮಾತ್ರವೇ ನಿಯಮಿತವಾಗಿದೆಯೇ” ಎಂದು ಪ್ರಶ್ನಿಸಿದರು. ಇದು ಸುಗತ ಬೋಸ್ ನೀಡಿರುವ ದುರದೃಷ್ಟಕರ ಹೇಳಿಕೆಯಾಗಿದೆ.

ನಿರಾಶ್ರಿತರ ಬಗ್ಗೆ ಭಾರತ ತೋರಿದಂತಹ ಮೃದು ಧೋರಣೆಯನ್ನು ವಿಶ್ವದ ಇನ್ಯಾವ ದೇಶವೂ ತೋರಿಲ್ಲ. ಅಲ್ಲದೆ ಮ್ಯಾನ್ಮಾರ್‌ಗೆ ವಾಪಸಾಗುವ ರೊಹಿಂಗ್ಯಾಗಳಿಗೆ ವ್ಯವಸ್ಥೆ ಕಲ್ಪಿಸುವ ಕಾರ್ಯದಲ್ಲಿ ಸಹಕಾರ ನೀಡುವುದಾಗಿ ನಾವು ಮ್ಯಾನ್ಮಾರ್ ಸರಕಾರಕ್ಕೆ ತಿಳಿಸಿದ್ದೇವೆ ಎಂದು ರಿಜಿಜು ಹೇಳಿದರು. ಬಳಿಕ ಹೇಳಿಕೆ ನೀಡಿದ ಗೃಹ ಸಚಿವ ರಾಜನಾಥ್ ಸಿಂಗ್, ಭಾರತದ ಭದ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಲಾಗದು. ಅಕ್ರಮವಾಗಿ ವಾಸಿಸುತ್ತಿರುವ ರೊಹಿಂಗ್ಯಾರನ್ನು ಗಡಿಪಾರು ಮಾಡುವಂತೆ ಎಲ್ಲಾ ರಾಜ್ಯ ಸರಕಾರಗಳಿಗೂ ಸೂಚನೆ ರವಾನಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News