ಗೋಹತ್ಯೆ ಭಯೋತ್ಪಾದನೆಗಿಂತ ದೊಡ್ಡ ಅಪರಾಧ ಎಂದ ಬಿಜೆಪಿ ಶಾಸಕ!
ಜೈಪುರ, ಜು. 31: ಭಾರತದಲ್ಲಿ ಗೋವುಗಳನ್ನು ಮಾತೆಯಂತೆ ನಡೆಸಿಕೊಳ್ಳುತ್ತಿರುವುದರಿಂದ ಗೋ ಹತ್ಯೆ ಭಯೋತ್ಪಾದನೆಗಿಂತ ದೊಡ್ಡ ಅಪರಾಧ ಎಂದು ಬಿಜಿಪಿ ಶಾಸಕ ಜ್ಞಾನ್ ದೇವ್ ಅಹುಜಾ ಸೋಮವಾರ ಹೇಳಿದ್ದಾರೆ.
ಭಯೋತ್ಪಾದಕರು 2ರಿಂದ 5 ಮಂದಿಯನ್ನು ಹತ್ಯೆಗೈಯುತ್ತಾರೆ. ಆದರೆ, ಗೋಹತ್ಯೆ ಸಾವಿರಾರು, ಲಕ್ಷಾಂತರರ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಅವರು ಹೇಳಿದರು. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಗೋಹತ್ಯೆ ಜನರನ್ನು ಪ್ರಚೋದಿಸುತ್ತದೆ ಹಾಗೂ ಅವರ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ. ಇದು ಕೆಲವು ಘಟನೆಗಳಿಗೆ ಕಾರಣವಾಗಬಹುದು ಎಂದರು. ನ್ಯಾಯಾಲಯ ಇದನ್ನು ಸ್ವೀಕರಿಸಬೇಕು. ಇಂತಹ ಘಟನೆಗಳನ್ನು ಹೇಗೆ ನಿಲ್ಲಿಸಬೇಕು ? ಎಂದು ಅವರು ಪ್ರಶ್ನಿಸಿದ್ದಾರೆ.
ಮಾತೆಗೆ ಗೌರವ ನೀಡುವ ದೇಶ ಭಾರತ. ಗೀತಾ, ಧಾತ್ರಿ, ಗೋವು, ಗಂಗಾ, ತುಳಸಿ ಹಾಗೂ ನದಿ ಉಗಮವನ್ನು ಈ ದೇಶದಲ್ಲಿ ಮಾತೆ ಎಂದು ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ದೇಶದಲ್ಲಿ ತಾಯಿಯೊಂದಿಗೆ ಯಾವುದೇ ದುರ್ನಡತೆ ಅಥವಾ ಗೂಂಡಾಗಿರಿಯನ್ನು ಸಹಿಸಲು ಸಾಧ್ಯವಿಲ್ಲ. ಇದು ಭಯೋತ್ಪಾದನೆಗಿಂತ ಅತಿ ದೊಡ್ಡ ಅಪರಾಧ ಎಂದು ಅವರು ಹೇಳಿದ್ದಾರೆ.