‘ಅಚ್ಛೇ ದಿನ್ ಕಬ್ ಆಯೇಂಗೆ' ಹಾಡು ‘ಅಚ್ಛೇ ದಿನ್ ಆ ಗಯೇ' ಆದ ಕಥೆ!

Update: 2018-07-31 15:18 GMT

ಹೊಸದಿಲ್ಲಿ, ಜು.31: ಐಶ್ವರ್ಯ ರೈ ಬಚ್ಚನ್, ಅನಿಲ್ ಕಪೂರ್ ಹಾಗೂ ರಾಜಕುಮಾರ್ ರಾವ್ ಅಭಿನಯದ ಫನ್ನೇ ಖಾನ್ ಚಿತ್ರದ  ತಯಾರಕರು ಒಂದೇ ಹಾಡಿನ ಎರಡು ಅವತರಣಿಕೆಗಳನ್ನು ಬಿಡುಗಡೆಗೊಳಿಸಿದ್ದಾರೆ.

ಮೊದಲ ಅವತರಣಿಕೆಯ ಹಾಡು ‘ಮೇರೆ ಅಚ್ಛೇ ದಿನ್ ಕಬ್ ಆಯೇಂಗೆ' ಒಂದು ವಾರದ ಹಿಂದೆ ಬಿಡುಗಡೆಗೊಳಿಸಲಾಗಿತ್ತು. ಆದರೆ ಈ ಹಾಡನ್ನು ಸಾಮಾಜಿಕ ಜಾಲತಾಣಿಗರು ಮೋದಿ ಸರಕಾರವನ್ನು ಟೀಕಿಸಲು ಉಪಯೋಗಿಸಿದ್ದರು. ಪ್ರಧಾನಿಯ ‘ಅಚ್ಛೇ ದಿನ್’ ಘೋಷಣೆಯನ್ನೂ ಹಲವಾರು ಮಂದಿ ಅಣಕವಾಡಿದ್ದರು.

ಇದೀಗ ಅದೇ ಹಾಡಿನ ಇನ್ನೊಂದು ಅವತರಣಿಕೆ ಬಿಡುಗಡೆಗೊಂಡಿದೆ. ಆದರೆ ಹಾಡಿನ ಶೀರ್ಷಿಕೆಯಲ್ಲಿ ಅಲ್ಪ ಬದಲಾವಣೆಯಾಗಿದೆ. ಹಿಂದಿನ “ಮೇರೆ ಅಚ್ಛೇ ದಿನ್ ಕಬ್ ಆಯೇಗಿ'' ಬದಲು ಇದರಲ್ಲಿ `ಮೇರೆ ಅಚ್ಛೇ ದಿನ್ ಅಬ್ ಆಯೇ ರೆ'' ಎಂದಿದೆ. ಕೆಲವೊಂದು ವರದಿಗಳ ಪ್ರಕಾರ ಚಿತ್ರ ತಯಾರಕರು ಮೊದಲಿನ ಹಾಡನ್ನು ವಾಪಸ್ ಪಡೆಯುವ ಸಾಧ್ಯತೆಯಿದೆ.

ಮೊದಲಿನ ಹಾಡು ಬಿಡುಗಡೆಯಾದ ನಂತರ ಅದನ್ನು ಸರಕಾರದ ವಿರುದ್ಧ ಟೀಕೆಗೆ ಬಳಸಿದ್ದರಿಂದ ಚಿತ್ರ ತಯಾರಕರಿಗೆ ಕೆಲವು ಉನ್ನತ ವ್ಯಕ್ತಿಗಳಿಂದ ಕರೆ ಬಂದಿದೆಯೆನ್ನಲಾಗಿದೆ. ಇದರ ನಂತರ ಹಾಡಿನ ಎರಡನೇ ಅವತರಣಿಕೆ ಬಿಡುಗಡೆಗೊಂಡಿದೆ.

ಮೊದಲಿನ ಹಾಡಿಗೆ ಅನಗತ್ಯವಾಗಿ ರಾಜಕೀಯ ಬಣ್ಣ ನೀಡಲಾಗಿದ್ದರಿಂದಲೇ  ಅದರಲ್ಲಿ ಅಲ್ಪ ಬದಲಾವಣೆ ತರಬೇಕಾಯಿತೆಂದು ಚಿತ್ರದ ನಿರ್ದೇಶಕ ಅತುಲ್ ಮಂಜ್ರೇಕರ್ ಹೇಳಿದ್ದಾರೆ. “ಮೊದಲ ಹಾಡನ್ನು ತಯಾರಿಸುವಾಗ ಸರಕಾರದ ಘೋಷಣೆಯ ಬಗ್ಗೆ ನಮಗೆ ಹೊಳೆದಿರಲೇ ಇಲ್ಲ, ಇಂತಹ ಪ್ರತಿಕ್ರಿಯೆ ಕೂಡ ನಾವು ನಿರೀಕ್ಷಿಸಿರಲಿಲ್ಲ ಈ ಚಿತ್ರ ಒಬ್ಬ ಕ್ಯಾಬ್ ಚಾಲಕ ಮತ್ತಾತನ ಕನಸಿನ ಬಗ್ಗೆಯಾಗಿದೆ. ಜನರು ಅದನ್ನು ತಪ್ಪಾಗಿ ಅರ್ಥೈಸುವುದಿಲ್ಲ ಎಂದು ನಿರೀಕ್ಷಿಸುತ್ತೇನೆ'' ಎಂದು ಮಂಜ್ರೇಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News