ಶಬರಿಮಲೆ ದೇವಳಕ್ಕೆ ಮಹಿಳೆಯರಿಗೆ ಪ್ರವೇಶ: ತೀರ್ಪು ಕಾಯ್ದಿರಿಸಿದ ಸರ್ವೋಚ್ಚ ನ್ಯಾಯಾಲಯ

Update: 2018-08-01 18:15 GMT

ಹೊಸದಿಲ್ಲಿ, ಆ.1: ಕೇರಳದ ಶಬರಿಮಲೆ ಕ್ಷೇತ್ರಕ್ಕೆ 10ರಿಂದ 50 ವರ್ಷ ವಯೋಮಾನದ ಮಹಿಳೆಯರಿಗೆ ಪ್ರವೇಶವನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಸರ್ವೋಚ್ಚ ನ್ಯಾಯಾಲಯವು ಬುಧವಾರ ತನ್ನ ತೀರ್ಪನ್ನು ಕಾಯ್ದಿರಿಸಿದೆ.

ಏಳು ದಿನಗಳಲ್ಲಿ ಹೇಳಿಕೆಗಳನ್ನು ಸಂಕಲಿಸಿ,ಅವುಗಳನ್ನು ತನ್ನ ಮುಂದೆ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠವು ಉಭಯ ಕಡೆಗಳ ವಕೀಲರಿಗೆ ಸೂಚಿಸಿತು. ನ್ಯಾಯಮೂರ್ತಿಗಳಾದ ಆರ್.ಎಫ್.ನರಿಮನ್, ಎ.ಎಂ.ಖನ್ವಿಲ್ಕರ್,ಡಿ.ವೈ.ಚಂದ್ರಚೂಡ ಮತ್ತು ಇಂದು ಮಲ್ಹೋತ್ರಾ ಅವರು ಪೀಠದ ಇತರ ಸದಸ್ಯರಾಗಿದ್ದಾರೆ.

ಜ್ವಲಂತ ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ವಿರುದ್ಧ ತಾರತಮ್ಯಕ್ಕೆ ಅವಕಾಶವಿಲ್ಲ ಎಂದು ನ್ಯಾಯಾಲಯವು ಜು.31ರಂದು ವಿಚಾರಣೆ ಸಂದರ್ಭ ಸೂಚ್ಯವಾಗಿ ಹೇಳಿತ್ತು.

ಭಾರತೀಯ ಯುವ ವಕೀಲರ ಸಂಘ ಮತ್ತು ಇತತರು ಈ ಮೇಲ್ಮನವಿಗಳನ್ನು ಸಲ್ಲಿಸಿದ್ದರು.

ಶಬರಿಮಲೆ ದೇವಸ್ಥಾನಕ್ಕೆ ನಿರ್ದಿಷ್ಟ ವಯೋಗುಂಪಿನ ಮಹಿಳೆಯರ ಪ್ರವೇಶದ ವಿವಾದಾಸ್ಪದ ವಿಷಯದ ಕುರಿತು ತನ್ನ ನಿಲುವನ್ನು ಆಗಾಗ್ಗೆ ಬದಲಿಸುತ್ತಿದ್ದ ಕೇರಳ ಸರಕಾರವು,ತಾನೀಗ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ನೀಡುವ ಬಗ್ಗೆ ಒಲವು ಹೊಂದಿದ್ದೇನೆ ಎಂದು ಜು.18ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.

ಮಹಿಳೆಯರಿಗೆ ದೇವಸ್ಥಾನ ಪ್ರವೇಶವನ್ನು ನಿಷೇಧಿಸುವ ಪದ್ಧತಿಯು ತಾರತಮ್ಯಕ್ಕೆ ಸಮನಾಗಿದೆಯೇ ಮತ್ತು ಸಂವಿಧಾನದಡಿ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆಯೇ ಎನ್ನುವುದು ಸೇರಿದಂತೆ ಐದು ಪ್ರಶ್ನೆಗಳನ್ನು ರೂಪಿಸಿದ ಬಳಿಕ 2017, ಅ.13ರಂದು ಸರ್ವೋಚ್ಚ ನ್ಯಾಯಾಲಯವು ಪ್ರಕರಣವನ್ನು ಸಂವಿಧಾನ ಪೀಠಕ್ಕೆ ಒಪ್ಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News