ವ್ಯಭಿಚಾರದ ಕುರಿತ ಐಪಿಸಿ ನಿಯಮ ಮಾನವ ಹಕ್ಕು ಉಲ್ಲಂಘಿಸುತ್ತದೆ: ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಆ. 2: ವ್ಯಭಿಚಾರದ ಕುರಿತ ಭಾರತೀಯ ದಂಡ ಸಂಹಿತೆಯ ನಿಯಮ ವಿವಾಹಿತ ಪುರುಷ ಹಾಗೂ ಮಹಿಳೆಯನ್ನು ವಿಭಿನ್ನವಾಗಿ ಪರಿಗಣಿಸುವುದರಿಂದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಭಾರತೀಯ ದಂಡ ಸಂಹಿತೆ 497ನ್ನು ‘ನಿರಂಕುಶ’ ಎಂದು ವ್ಯಾಖ್ಯಾನಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ಸದಸ್ಯರ ಪೀಠ, ವಿವಾಹಿತನೊಂದಿಗಿನ ಮಹಿಳೆಯ ಸಂಬಂಧ ಪತಿಯ ಒಪ್ಪಿಗೆ ಹಾಗೂ ಪರೋಕ್ಷ ಸಮ್ಮತಿ ಅವಲಂಬಿಸಿದೆ ಎಂದು ನಿಯಮ ಹೇಳುತ್ತದೆ ಎಂದಿದೆ. 497 ವಿಧಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಎಫ್. ನಾರಿಮನ್, ಎ.ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ ಹಾಗೂ ಇಂದು ಮಲ್ಹೋತ್ರ ಅವರನ್ನು ಕೂಡ ಒಳಗೊಂಡ ಪೀಠ, ಪತ್ನಿಯ ಒಪ್ಪಿಗೆಯೊಂದಿಗೆ ವಿವಾಹಿತ ಮಹಿಳೆಯ ವಿವಾಹಿತ ಪುರುಷನೊಂದಿಗಿನ ಲೈಂಗಿಕ ಸಂಬಂಧವನ್ನು ವ್ಯಬಿಚಾರದ ಅಪರಾಧವಲ್ಲ ಎಂದು ನಿಯಮ ಹೇಳುತ್ತದೆ ಎಂದು ಹೇಳಿದೆ. ಇಟಲಿಯಲ್ಲಿ ವಾಸಿಸುತ್ತಿರುವ ಭಾರತೀಯ ದೂರುದಾರ ಜೋಸೆಫ್ ಶೈನೆ ಪರ ನ್ಯಾಯಾಲಯಕ್ಕೆ ಹಾಜರಾದ ನ್ಯಾಯವಾದಿ ಕಾಳೀಶ್ವರಂ ರಾಜ್, 497 ವಿಧಿಯ ಹಲವು ಮುಖಗಳನ್ನು ಉಲ್ಲೇಖಿಸಿದರು. ಅವಿವಾಹಿತ ಪ್ರಬುದ್ಧರ ಒಪ್ಪಿತ ಲೈಂಗಿಕ ಸಂಬಂಧಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ. ಇದು ವ್ಯಭಿಚಾರದ ಪ್ರಕರಣದ ಸಂದರ್ಭ ವಿವಾಹಿತ ಮಹಿಳೆ ಹಾಗೂ ವಿವಾಹಿತ ಪುರುಷನನ್ನು ವಿಭಿನ್ನವಾಗಿ ಪರಿಗಣಿಸುತ್ತದೆ ಎಂದರು. ವ್ಯಭಿಚಾರದ ಸಂದರ್ಭ ಪುರುಷನನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ. ಆದರೆ, ವಿವಾಹಿತ ಮಹಿಳೆಯರನ್ನು ವಿಚಾರಣೆಗೆ ಒಳಪಡಿಸುವುದಿಲ್ಲ ಎಂದು ಅವರು ಹೇಳಿದರು. ಹಾಗೂ ಈ ವಿಧಿಯ ವಿವಿಧ ಅಸಂಗತತೆಯನ್ನು ಉಲ್ಲೇಖಿಸಿದರು.