×
Ad

ಅಮಿತ್ ಶಾ ಹೇಳಿಕೆ ನಂಬಲರ್ಹವಲ್ಲ: ಸಿಟ್

Update: 2018-08-02 20:28 IST

ಅಹ್ಮದಾಬಾದ್, ಆ. 2: ನರೋಡಾ ಗಾಂವ್ ಹತ್ಯಾಕಾಂಡ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಹಾಗೂ ಗುಜರಾತ್‌ನ ಮಾಜಿ ಸಚಿವೆ ಮಾಯಾ ಕೊಡ್ನಾನಿ ಕುರಿತ ಬಿಜೆಪಿ ವರಿಷ್ಠ ಅಮಿತ್ ಶಾ ಅವರ ಸಮರ್ಥನೆಯ ಹೇಳಿಕೆ ನಂಬಲರ್ಹವಲ್ಲ ಹಾಗೂ ಇದನ್ನು ಪರಿಗಣಿಸಬಾರದು ಎಂದು ಸುಪ್ರೀಂ ಕೋರ್ಟ್ ನಿಯೋಜಿತ ಸಿಟ್ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ. 2002ರಲ್ಲಿ ಗಲಭೆ ಸ್ಫೋಟಗೊಂಡ ದಿನ ಮಾಯಾ ಕೊಡ್ನಾನಿ ಅವರು ವಿಧಾನ ಸಭೆಯಲ್ಲಿ ಇದ್ದರು. ಅನಂತರ ಅವರು ಸೋಲಾ ಸಿವಿಲ್ ಆಸ್ಪತ್ರೆಗೆ ತೆರಳಿದರು. ನರೋಡಾಗಾಂವ್‌ನಲ್ಲಿ ಇರಲಿಲ್ಲ ಎಂಬುದನ್ನು ಸಾಬೀತುಪಡಿಸುವಂತೆ ನ್ಯಾಯಾಲಯ ಅಮಿತ್ ಶಾ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಅಮಿತ್ ಶಾ ಅವರು ಮಾಯಾ ಕೊಡ್ನಾನಿ ಅವರ ಪರ ಸಾಕ್ಷಿಯಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ದೀರ್ಘ ಕಾಲದ ಬಳಿಕ ಹೇಳಿಕೆ ನೀಡಿರುವುದರಿಂದ ಮಾಯಾ ಕೊಡ್ನಾನಿ ಅವರನ್ನು ಸಮರ್ಥಿಸಿ ಅಮಿತ್ ಶಾ ನೀಡಿದ ಹೇಳಿಕೆ ಅಪ್ರಸ್ತುತ ಎಂದು ಸರಕಾರಿ ವಿಶೇಷ ವಕೀಲ ಗೌರಂಗ್ ವ್ಯಾಸ್ ಅವರು ಬುಧವಾರ ನ್ಯಾಯಮೂರ್ತಿ ಎಂ.ಕೆ. ದೇವ್‌ಗೆ ತಿಳಿಸಿದರು. ಸಿವಿಲ್ ಆಸ್ಪತ್ರೆಯಲ್ಲಿ ಮಾಯಾ ಕೊಡ್ನಾನಿ ಇದ್ದರು ಎಂಬುದನ್ನು ಯಾವ ಆರೋಪಿಗಳು ಕೂಡ ಹೇಳಿಲ್ಲ. ಆದುದರಿಂದ ಅಮಿತ್ ಶಾ ಅವರ ಹೇಳಿಕೆ ನಂಬಲರ್ಹವಲ್ಲ ಎಂದು ವ್ಯಾಸ್ ನ್ಯಾಯಾಲಯದ ಮುಂದೆ ಹೇಳಿದ್ದಾರೆ.

ಈ ಪ್ರಕರಣದ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.

ಗಲಭೆ ನಡೆದ ದಿನ ತಾನು ಮಾಯಾ ಕೊಡ್ನಾನಿ ಅವರನ್ನು ಗಾಂಧಿನಗರದ ಗುಜರಾತ್ ವಿಧಾನ ಸಭೆಯಲ್ಲಿ ಹಾಗೂ ಅನಂತರ ಅಹ್ಮದಾಬಾದ್‌ನ ಸೋಲಾ ಸಿವಿಲ್ ಆಸ್ಪತ್ರೆಯಲ್ಲಿ ಭೇಟಿಯಾಗಿದ್ದೆ ಎಂದು ಅಮಿತ್ ಶಾ ನ್ಯಾಯಾಲಯದ ಮುಂದೆ ಹೇಳಿದ್ದರು. 96 ಜನರು ಹತ್ಯೆಯಾದ ನರೋಡಾ ಪಾಟಿಯಾ ಗಲಭೆಯಲ್ಲಿ ಮಾಯಾ ಕೊಡ್ನಾನಿ ಅವರನ್ನು ಅಪರಾಧಿ ಎಂದು ಪರಿಗಣಿಸಲಾಗಿತ್ತು ಹಾಗೂ 28 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ಈ ವರ್ಷ ಎಪ್ರಿಲ್‌ನಲ್ಲಿ ಗುಜರಾತ್ ಉಚ್ಚ ನ್ಯಾಯಾಲಯ ಕೊಡ್ನಾನಿ ಖುಲಾಸೆಗೊಳಿಸಿತ್ತು.

2002ರಲ್ಲಿ ನಡೆದ 9 ಕೋಮು ಗಲಭೆಯಲ್ಲಿ ಇದು ಕೂಡ ಒಂದು. ಸುಪ್ರೀಂ ಕೋರ್ಟ್ ನಿಯೋಜಿತ ಸಿಟ್ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ. 2002 ಫೆಬ್ರವರಿ 27ರಂದು ಗೋಧ್ರಾ ರೈಲು ದಹನ ಪ್ರತಿಭಟಿಸಿ ನಡೆದ ಪ್ರತಿಭಟನೆ ಸಂದರ್ಭ ನರೋಡಾ ಗಾಂವ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ 11 ಮಂದಿಯನ್ನು ಹತ್ಯೆಗೈಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News