ಬೆಳಗಾವಿ ವಿವಾದ: ಕರ್ನಾಟಕ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲು ಶಿವಸೇನೆ ಆಗ್ರಹ

Update: 2018-08-02 15:03 GMT

ಮುಂಬೈ, ಆ.2: ಬೆಳಗಾವಿಯನ್ನು ಕರ್ನಾಟಕದ ಎರಡನೇ ರಾಜಧಾನಿಯನ್ನಾಗಿ ಮಾಡುವುದಾಗಿ ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ನ್ಯಾಯಾಂಗ ನಿಂದನೆ ನೋಟಿಸ್ ಕಳಿಸುವಂತೆ ಕೋರಿ ಮಹಾರಾಷ್ಟ್ರ ಸರಕಾರ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಬೇಕು ಎಂದು ಶಿವಸೇನೆ ತಿಳಿಸಿದೆ. ಬೆಳಗಾವಿಯನ್ನು ಕೇಂದ್ರೀಕರಿಸಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಮಧ್ಯೆ ಸುಪ್ರೀಂಕೋರ್ಟ್‌ನಲ್ಲಿ ಗಡಿ ವಿವಾದವಿದೆ. ಆದರೆ ಜುಲೈ 31ರಂದು ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಮಹಾರಾಷ್ಟ್ರದ ಭಾಗವಾಗಲು ಬಯಸುವ ಬೆಳಗಾವಿಯ ಜನತೆಗೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನ’ದ ಸಂಪಾದಕೀಯ ಬರಹದಲ್ಲಿ ತಿಳಿಸಲಾಗಿದೆ. ಬೆಳಗಾವಿಯ ಕುರಿತ ವಿವಾದ ಇನ್ನೂ ನ್ಯಾಯಾಲಯದ ವಿಚಾರಣೆಯಲ್ಲಿರುವಾಗಲೇ ಕುಮಾರಸ್ವಾಮಿ ಸರಕಾರ ಇಂತಹ ನಿರ್ಧಾರ ಕೈಗೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಶಿವಸೇನೆ, ಮಹಾರಾಷ್ಟ್ರ ಸರಕಾರ ಈ ವಿಷಯವನ್ನು ತಕ್ಷಣ ಗಮನಿಸಿ ಸುಪ್ರೀಂಕೋರ್ಟ್‌ನಲ್ಲಿ ಪ್ರತಿಭಟನೆ ಸಲ್ಲಿಸಬೇಕು ಮತ್ತು ಕರ್ನಾಟಕಕ್ಕೆ ನ್ಯಾಯಾಂಗ ನಿಂದನೆ ನೋಟಿಸ್ ಕಳುಹಿಸುವಂತೆ ಕೋರಬೇಕು ಎಂದು ಹೇಳಿದೆ.

  ಬೆಳಗಾವಿಯ ಅಭಿವೃದ್ಧಿಯ ದೃಷ್ಟಿಯಿಂದ ಅದನ್ನು ಕರ್ನಾಟಕದ ಎರಡನೇ ರಾಜಧಾನಿಯನ್ನಾಗಿಸುವ ಪ್ರಸ್ತಾವನೆ ಕಳೆದ 12 ವರ್ಷಗಳಿಂದ ಸರಕಾರದ ಪರಿಗಣನೆಯಲ್ಲಿದೆ. 2006ರಲ್ಲಿ ತಾನು ಮುಖ್ಯಮಂತ್ರಿಯಾದಂದಿನಿಂದಲೂ ಈ ವಿಷಯ ಇತ್ಯರ್ಥವಾಗದೆ ಉಳಿದಿದೆ. ಇದೀಗ ಈ ಪ್ರಸ್ತಾವನೆಯನ್ನು ಜಾರಿಗೊಳಿಸಲು ಗಂಭೀರ ಚಿಂತನೆ ನಡೆಸಿದ್ದೇನೆ ಎಂದು ಜುಲೈ 31ರಂದು ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದರು ಎಂದು ‘ಸಾಮ್ನ’ದ ಸಂಪಾದಕೀಯ ಬರಹದಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News