'ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ನಿರ್ದೇಶಕನಿಗೆ ಹೀಗೊಂದು ಆಕ್ಸಿಡೆಂಟ್ !

Update: 2018-08-03 09:10 GMT

ಹೊಸದಿಲ್ಲಿ,ಆ.3 : ಕನಿಷ್ಠ ರೂ. 34 ಕೋಟಿಯಷ್ಟು ಜಿಎಸ್‍ಟಿ ವಂಚನೆಗೈದ ಆರೋಪದ ಮೇಲೆ ನಿರ್ಮಾಣ ಹಂತದಲ್ಲಿರುವ ‘ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ನಿರ್ದೇಶಕ ವಿಜಯ್ ರತ್ನಾಕರ್ ಗುಟ್ಟೆ ಅವರನ್ನು  ಜಿಎಸ್‍ಟಿ ಇಂಟಲಿಜೆನ್ಸ್ ಮಹಾನಿರ್ದೇಶನಾಲಯದ ಅಧಿಕಾರಿಗಳು ಮುಂಬೈಯಲ್ಲಿ ಬಂಧಿಸಿದ್ದಾರೆ. ಅವರನ್ನು ಮುಂಬೈಯ ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಿದ ತರುವಾಯ ಆಗಸ್ಟ್ 14ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಅವರೀಗ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ.

ವಿಜಯ್ ಗುಟ್ಟೆ ಅವರ ವಿಆರ್‍ಜಿ ಡಿಜಿಟಲ್ ಕಾರ್ಪ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಹೊರೈಝಾನ್ ಔಟ್‍ಸೋರ್ಸ್ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯಿಂದ ಅನಿಮೇಶನ್ ಹಾಗೂ ಮ್ಯಾನ್‍ಪವರ್ ಸೇವೆಗಳನ್ನು ಪಡೆದಿದ್ದಕ್ಕಾಗಿ  ರೂ. 34 ಕೋಟಿ  ಜಿಎಸ್‍ಟಿ ಸಂಬಂಧ ನಕಲಿ ಇನ್ವಾಯಿಸ್  ಸೃಷ್ಟಿಸಿದ ಆರೋಪ ಎದುರಿಸುತ್ತಿದೆ. ಹೊರೈಝಾನ್ ಸಂಸ್ಥೆ ಕೂಡ ರೂ. 170 ಕೋಟಿ ಜಿಎಸ್‍ಟಿ ವಂಚನೆಗಾಗಿ ಸರಕಾರಿ ಏಜನ್ಸಿಯ ನಿಗಾದಲ್ಲಿದೆ.

ಯಾವುದೇ ವಸ್ತು ಅಥವಾ ಸೇವೆ ಪಡೆಯದೆಯೇ ನಕಲಿ ಬಿಲ್, ಇನ್ವಾಯಿಸ್ ಮೂಲಕ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದಿದ್ದಕ್ಕಾಗಿ ವಿಜಯ್ ಗುಟ್ಟೆ ವಿರುದ್ಧ ಸಿಜಿಎಸ್‍ಟಿ ಕಾಯಿದೆಯ ಸೆಕ್ಷನ್ 132(1) (ಸಿ) ಅನ್ವಯ ಪ್ರಕರಣ ದಾಖಲಾಗಿದೆ.

ವಿಜಯ್ ಗುಟ್ಟೆ ಇಲ್ಲಿಯ ತನಕ ಇಮೋಷನಲ್ ಅತ್ಯಾಚಾರ್, ಟೈಮ್ ಬಾರಾ ವೈಟ್ ಹಾಗೂ ಬದ್ಮಾಶಿಯಾನ್ ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ‘ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್ ಬರು ಅವರ ಕೃತಿಯಾಧರಿತವಾಗಿದೆ. ಅನುಪಮ್ ಖೇರ್ ಅವರು ಮನಮೋಹನ್ ಸಿಂಗ್ ಆಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಡಿಸೆಂಬರ್ 21ರಂದು ಈ ಚಿತ್ರ ಬಿಡುಗಡೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News