×
Ad

ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಸುಪ್ರೀಂ ಕೋರ್ಟ್

Update: 2018-08-04 20:19 IST

ಹೊಸದಿಲ್ಲಿ,ಆ.4: ಮದ್ರಾಸ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರ ಪದೋನ್ನತಿಯೊಂದಿಗೆ ಸರ್ವೋಚ್ಚ ನ್ಯಾಯಾಲಯವು ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ಹೊಸ ದಾಖಲೆಯೊಂದನ್ನು ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಅದು ಮೂವರು ಮಹಿಳಾ ನ್ಯಾಯಾಧೀಶರನ್ನು ಹೊಂದಿರಲಿದೆ. ನ್ಯಾ.ಆರ್. ಭಾನುಮತಿ ಮತ್ತು ನ್ಯಾ.ಇಂದು ಮಲೋತ್ರಾ ಅವರು ಇತರ ಇಬ್ಬರು ಮಹಿಳಾ ನ್ಯಾಯಾಧೀಶರಾಗಿದ್ದಾರೆ.

ರಾಷ್ಟ್ರಪತಿಗಳು ಶುಕ್ರವಾರ ನ್ಯಾ.ಇಂದಿರಾ ಬ್ಯಾನರ್ಜಿ,ಒರಿಸ್ಸಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿನೀತ ಸರನ್ ಮತ್ತು ಉತ್ತರಾಖಂಡ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಳಿಸಿದ್ದರು.

ನ್ಯಾ.ಬ್ಯಾನರ್ಜಿ ಅವರು ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲಿ ಎಂಟನೇ ಮಹಿಳಾ ನ್ಯಾಯಾಧೀಶರಾಗಲಿದ್ದಾರೆ. ಫಾತಿಮಾ ಬೀವಿ,ಸುಜಾತಾ ವಿ.ಮನೋಹರ,ರುಮಾ ಪಾಲ್,ಜ್ಞಾನಸುಧಾ ಮಿಶ್ರಾ ಮತ್ತು ರಂಜನಾ ಪ್ರಕಾಶ ದೇಸಾಯಿ ಅವರು ಈ ಹಿಂದೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದರು.

 ಕೋಲ್ಕತಾದ ಪ್ರೆಸಿಡೆನ್ಸಿ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾದ ಬ್ಯಾನರ್ಜಿ ಅವರು ವಕೀಲರಾಗಿ ತನ್ನ ನ್ಯಾಯಾಂಗ ವೃತ್ತಿಯನ್ನು ಆರಂಭಿಸಿದ್ದರು. 2002ರಲ್ಲಿ ಅವರು ನೇರವಾಗಿ ಕೊಲ್ಕತ್ತಾ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಅವರು ಕೋಲ್ಕತಾ ಮೂಲದ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದು,2017ರಲ್ಲಿ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದರು. ಸೆಪ್ಟೆಂಬರ್‌ನಲ್ಲಿ 62ಕ್ಕೆ ಕಾಲಿರಿಸುವ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಸುಮಾರು ನಾಲ್ಕು ವರ್ಷಗಳ ಸೇವಾವಧಿಯನ್ನು ಹೊಂದಲಿದ್ದಾರೆ. ಅವರ ಪದೋನ್ನತಿಯೊಂದಿಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಕೋಲ್ಕತಾಕ್ಕೆ ಮತ್ತೆ ಪ್ರತಿನಿಧಿತ್ವ ಲಭಿಸಿದೆ. ನ್ಯಾ.ಎ.ಕೆ.ಗಂಗೂಲಿ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಕೋಲ್ಕತಾ ಮೂಲದ ಹಿಂದಿನ ನ್ಯಾಯಾಧೀಶರಾಗಿದ್ದರು.

 ತನ್ಮಧ್ಯೆ ನ್ಯಾ.ಗೀತಾ ಮಿತ್ತಲ್ ಅವರು ಜಮ್ಮು-ಕಾಶ್ಮೀರ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಅವರು ಆ ಹೈಕೋರ್ಟ್‌ನ ಇತಿಹಾಸದಲ್ಲಿ ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶರೆಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News