ಕಾರವಾನ್: ಹಲವೆಡೆ ವೇಗ ಕಳೆದುಕೊಳ್ಳುವ ಪಯಣ

Update: 2018-08-04 18:30 GMT

‘ಜಿಂದಗಿ ನಾ ಮಿಲೇಗಿ ದೋಬಾರ’, ‘ಪೀಕು’ ಚಿತ್ರಗಳ ನಂತರ ‘ರೋಡ್ ಡ್ರಾಮಾ’ ಕತೆಯನ್ನೊಳಗೊಂಡ ವಿಭಿನ್ನವಾದ ಚಿತ್ರ ‘ಕಾರವಾನ್’.

ಆಕರ್ಷಣ್ ಖುರಾನಾ ನಿರ್ದೇಶನದ ಈ ಚಿತ್ರಕ್ಕೆ ಕತೆ ಒದಗಿಸಿದವರು ಬಿಜೋಯ್ ನಂಬಿಯಾರ್.
ಫೋಟೋಗ್ರಾಫರ್ ಆಗಬೇಕೆಂದುಕೊಂಡಿದ್ದ ಯುವಕ ಅವಿನಾಶ್(ದುಲ್ಕರ್ ಸಲ್ಮಾನ್) ಆಸೆಗೆ ತಣ್ಣೀರೆರಚಿ ಬಲವಂತವಾಗಿ ಐಟಿ ಕಂಪೆನಿಗೆ ಸೇರಿಸಿದ ತಂದೆ ತೀರ್ಥಯಾತ್ರೆ ಸಂದರ್ಭ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆಂಬ ಫೋನ್ ಕಾಲ್ ಮಗನಿಗೆ ಬಂದಾಗ ಆತ ಆಘಾತಕ್ಕೆ ಒಳಗಾಗುವುದಿಲ್ಲ ಮತ್ತು ದುಃಖದ ಒಂದಿಷ್ಟು ಛಾಯೆಯೂ ಮುಖದ ಮೇಲೆ ಸುಳಿಯುವುದಿಲ್ಲ. ಯಾಕೆಂದರೆ ತಂದೆ ಮಗನ ಸಂಬಂಧ ಅಷ್ಟಕ್ಕಷ್ಟೇ.
ಅವಿನಾಶ್ ತನ್ನ ಹಳೆ ಗೆಳೆಯ ಮತ್ತು ಲೋಕಲ್ ಗ್ಯಾರೇಜು ಮಾಲಕ ಶೌಕತ್ (ಇರ್ಫಾನ್ ಖಾನ್) ಜತೆಗೂಡಿ ಮೃತದೇಹವನ್ನು ತರಲು ಕಾರ್ಗೋ ಆಫೀಸ್‌ಗೆ ಹೋದಾಗ ಟ್ರಾವೆಲ್ ಏಜನ್ಸಿಯವರ ಪ್ರಮಾದದಿಂದ ತಂದೆಯ ಬದಲಿಗೆ ಕೇರಳದ ಮಹಿಳೆಯೊಬ್ಬರ ಶವ ತಮ್ಮ ವಿಳಾಸಕ್ಕೆ ಮತ್ತು ತಂದೆಯ ಶವ ಕೇರಳದ ಕೊಚ್ಚಿಗೆ ಹೊರಟುಹೋದ ಬಗ್ಗೆ ತಿಳಿದುಬರುತ್ತೆ.
ಇಲ್ಲಿಂದ ಕತೆ ಮತ್ತು ಪ್ರಯಾಣ ಎರಡೂ ಶುರು.
ಪ್ರಯಾಣದ ನಡುವೆ ಸತ್ತ ಮಹಿಳೆಯ ಮೊಮ್ಮಗಳು ಕೂಡ ಇವರೊಂದಿಗೆ ಸೇರಿಕೊಂಡ ನಂತರ ಕತೆ ವೇಗ ಪಡೆದುಕೊಳ್ಳುತ್ತದೆ. ತೆಳು ಹಾಸ್ಯ ಮತ್ತು ಗಂಭೀರ ಸನ್ನಿವೇಶಗಳಿಂದ ಚಿತ್ರ ಕೊನೆವರೆಗೂ ಪ್ರೇಕ್ಷಕನನ್ನು ಹಿಡಿದಿಟ್ಟು ಕೊಳ್ಳುವಲ್ಲಿ ಸಫಲವಾದರೂ ಸಾಮಾನ್ಯ ಪ್ರೇಕ್ಷಕನ ತಾಳ್ಮೆಯನ್ನು ಅಲ್ಲಲ್ಲಿ ಪರೀಕ್ಷೆಗೆ ಒಳಪಡಿಸುತ್ತದೆ. ಚಿತ್ರದುದ್ದಕ್ಕೂ ನೋಡುಗನನ್ನು ಬೋರ್ ಹೊಡೆಸದಂತೆ ನೋಡಿಕೊಳ್ಳುವಲಿ್ಲ ನಿರ್ದೇಶಕರು ಅಲ್ಲಲ್ಲಿ ಎಡವಿದ್ದಾರೆ.
ತನ್ನ ತೆಳುಹಾಸ್ಯ ಡೈಲಾಗ್ ಡೆಲಿವರಿ ಮೂಲಕ ಇಡೀ ಚಿತ್ರವನ್ನು ಭುಜ ಕೊಟ್ಟು ಎತ್ತಿ ನಿಲ್ಲಿಸಿದ್ದು ಇರ್ಫಾನ್ ಖಾನ್ ಮಾತ್ರ. ಇಲ್ಲೂ ಇರ್ಫಾನ್ ತಾನೊಬ್ಬ ವರ್ಸಟೈಲ್ ನಟ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಇರ್ಫಾನ್ ಇಲ್ಲದಿದ್ದರೆ ಚಿತ್ರ ಬಂದದ್ದು ಹೋದದ್ದು ಯಾರಿಗೂ ಗೊತ್ತಾಗಿರಲಿಕ್ಕಿಲ್ಲ.
ಸಂಗೀತ ಮತ್ತು ಛಾಯಾಗ್ರಹಣ ಚಿತ್ರದ ಜೀವಾಳ. ಪ್ರತೀಕ್‌ಖುಹಾದ್, ಅನುರಾಗ್ ಸೈಕಿಯಾ, ಸ್ಲೋಚೀತಾ, ಇಮಾದ್ ಶಾ ಒಟ್ಟು ನಾಲ್ವರು ಸಂಗೀತ ನಿರ್ದೇಶಕರು ಚಿತ್ರಕ್ಕೆ ದುಡಿದಿದ್ದು ಹಾಡುಗಳು ಸಂದರ್ಭೋಚಿತವಲ್ಲದಿದ್ದರೂ ಕೇಳಲು ಇಂಪಾಗಿದೆ. ಅವಿನಾಶ್ ಅರುಣ್‌ರವರ ಛಾಯಾಗ್ರಹಣ ವಾಹ್ ಅನ್ನುವಂತಿದೆ. ನಲವತ್ತು ಐವತ್ತು ಸಾವಿರ ಕೊಟ್ಟು ದಕ್ಷಿಣ ಭಾರತದ ಪ್ಯಾಕೇಜ್ ಟೂರ್ ಹೋಗುವವರಿಗೆ ಈ ಚಿತ್ರ ತನ್ನ ಅದ್ಭುತ ದೃಶ್ಯಗಳಿಂದ ಸಿನೆಮಾ ಮಂದಿರದೊಳಗೆ ಕುಳಿತಲ್ಲೇ ಇಡೀ ಕೇರಳ ತಮಿಳುನಾಡಿನ ಅದ್ಭುತ ದರ್ಶನವನ್ನು ನೀಡುತ್ತಾರೆ ಛಾಯಾಗ್ರಹಕರು. ಮಲಯಾಳಂನ ಸೂಪರ್ ಸ್ಟಾರ್ ದುಲ್ಕರ್ ತಮ್ಮ ಮೊದಲ ಹಿಂದಿ ಚಿತ್ರದಲ್ಲೇ ಗಮನ ಸೆಳೆಯುವ ಅಭಿನಯ ನೀಡಿದ್ದಾರೆ.
ಬಾಡಿ ಲ್ಯಾಂಗ್ವೇಜ್ ಮತ್ತು ಡೈಲಾಗ್ ಡೆಲಿವರಿ ಎರಡರಲ್ಲೂ ಬಾಲಿವುಡ್‌ಗೆ ತಾನೊಬ್ಬ ಹೊಸಬ ಅನ್ನಿಸಿಕೊಳ್ಳುವುದಿಲ್ಲ.
ರಜನಿಕಾಂತ್‌ನಿಂದ ಹಿಡಿದು ಧನುಷ್‌ವರೆಗೆ ದಕ್ಷಿಣ ಭಾರತದ ಅದೆಷ್ಟೋ ನಾಯಕರುಗಳು ಬಾಲಿವುಡ್‌ನಲ್ಲಿ ಅದ್ಭುತ ಅಭಿನಯ ನೀಡಿದ ಹೊರತಾಗಿಯೂ ಹಿಂದಿ ಚಿತ್ರರಂಗ ಅವರನ್ನು ಅಪ್ಪಿಕೊಳ್ಳಲು ಹಿಂದೇಟು ಹಾಕಿರುವಾಗ, ದುಲ್ಕರ್ ಕೂಡ ಅದೇ ಸಾಲಿಗೆ ಸೇರಬಹುದೋ ಅಥವ ಬಾಲಿವುಡ್‌ನಲ್ಲಿ ತನ್ನ ಛಾಪು ಮೂಡಿಸಬಹುದೋ ಎನ್ನುವುದನ್ನು ಕಾಲವೇ ನಿರ್ಧರಿಸಬೇಕು.
ವಿರಾಮದ ನಂತರ ಚಿತ್ರವನ್ನು ಒಂದಷ್ಟು ಉದ್ದ ಅನಗತ್ಯವಾಗಿ ಎಳೆದು ಪ್ರೇಕ್ಷಕನ ತಾಳ್ಮೆಯನ್ನು ಪರೀಕ್ಷೆಗೆ ಒಳಪಡಿಸಿದರೂ ಕೊನೆಯಲ್ಲಿ ತಂದೆ ತಾಯಿಗಳ ಬಗ್ಗೆ ಮತ್ತು ಅವರ ಮಹತ್ವದ ಬಗ್ಗೆ ಅವರನ್ನು ಕಳಕೊಂಡ ದುಲ್ಕರ್ ಮತ್ತು ಅಮಲಾ ನಾಗರ್ಜುನ ಕೊಡುವ ಸಣ್ಣ ಉಪನ್ಯಾಸ ಪ್ರೇಕ್ಷಕರನ್ನು ಭಾವುಕಗೊಳಿಸುತ್ತದೆ.ಉತ್ತರ ಭಾರತೀಯರೊಂದಿಗೆ ತಮಿಳು ಮತ್ತು ಮಲಯಾಳಂ ಚಿತ್ರ ಪ್ರೇಮಿಗಳು ಈ ಚಿತ್ರವನ್ನು ಒಮ್ಮೆ ನೋಡುವುದರಲ್ಲಿ ಕಳಕೊಳ್ಳುವುದೇನಿಲ್ಲ.
ಭರಪೂರ ಮಸಾಲೆ, ಸೆಕ್ಸ್ ಮತ್ತು ಆ್ಯಕ್ಷನ್ ಇಷ್ಟಪಡುವವರು ಈ ಚಿತ್ರವನ್ನು ನೋಡದಿದ್ದರೆ ಒಳ್ಳೆಯದು.

Writer - ಶರೀಫ್ ಅಬ್ಬಾಸ್, ವಳಾಲ್

contributor

Editor - ಶರೀಫ್ ಅಬ್ಬಾಸ್, ವಳಾಲ್

contributor

Similar News