ಪೊಲೀಸ್ ಪರಿಶೀಲನೆಯಿಲ್ಲದೆ ಮೆಹುಲ್ ಚೋಕ್ಸಿಗೆ ಪಾಸ್‌ಪೋರ್ಟ್: ತನಿಖೆಗೆ ಆದೇಶ

Update: 2018-08-05 15:09 GMT

ಮುಂಬೈ, ಆ.5: ತಲೆಮರೆಸಿಕೊಂಡಿರುವ ಸ್ವರ್ಣಾಭರಣ ಉದ್ಯಮಿ ಮೆಹುಲ್ ಚೋಕ್ಸಿ 2015ರಲ್ಲಿ ಮುಂಬೈಯಲ್ಲಿ ಪೊಲೀಸ್ ಪರಿಶೀಲನೆಯಿಲ್ಲದೆ ಪಾಸ್‌ಪೋರ್ಟ್ ಪಡೆದಿರುವ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಪಿಎನ್‌ಬಿ ಹಗರಣದಲ್ಲಿ ಪ್ರಧಾನ ಆರೋಪಿಯಾಗಿರುವ ಚೋಕ್ಸಿಗೆ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ(ಆರ್‌ಪಿಒ) 2015ರಲ್ಲಿ ‘ಪೊಲೀಸ್ ಪರಿಶೀಲನೆ ಅಗತ್ಯವಿರದ  ಸ್ಥಾನಮಾನ’ ನೀಡಿದ ಕಾರಣ ‘ತತ್ಕಾಲ್’ ವಿಭಾಗದಲ್ಲಿ ಪಾಸ್‌ಪೋರ್ಟ್ ನೀಡಲಾಗಿದೆ ಎಂದು ಮುಂಬೈ ಪೊಲೀಸ್ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

2017ರ ಫೆಬ್ರವರಿ 23ರಂದು ಚೋಕ್ಸಿ ಮುಂಬೈಯ ಆರ್‌ಪಿಒಗೆ ಪೊಲೀಸ್ ಕಿಯರೆನ್ಸ್ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಚೋಕ್ಸಿಯ ಪೂರ್ವಚರಿತ್ರೆಯಲ್ಲಿ ಯಾವುದೇ ಅಪರಾಧ ಪ್ರಕರಣ ದಾಖಲಾಗಿಲ್ಲ ಎಂದು ಮಲಬಾರ್ ಹಿಲ್ ಪೊಲೀಸ್ ಠಾಣಾಧಿಕಾರಿ ಪ್ರಮಾಣಪತ್ರ ಒದಗಿಸಿದ್ದರು. ಈ ಪ್ರಮಾಣಪತ್ರವನ್ನು ಮುಂಬೈ ಆರ್‌ಪಿಒಗೆ ಕಳುಹಿಸಲಾಗಿದೆ. ಪೂರ್ವ ಚರಿತ್ರೆ(ಇದುವರೆಗಿನ ಬದುಕು)ಯ ಅಪರಾಧ ಪ್ರಕರಣ ಮತ್ತು ಮಾಹಿತಿ ವ್ಯವಸ್ಥೆ(ಸಿಎಐಎಸ್)ಯನ್ನು ಪರಿಶೀಲಿಸಿದ ಬಳಿಕ ‘ಕ್ಲಿಯರ್ ರಿಪೋರ್ಟ್’ ನೀಡಲಾಗುತ್ತದೆ. ವ್ಯಕ್ತಿಯೊಬ್ಬ ಈ ಹಿಂದೆ ಬಂಧಿಸಲ್ಪಟ್ಟಿದ್ದರೆ ಅದು ಸಿಎಐಎಸ್‌ನಲ್ಲಿ ನಮೂದಿಸಲ್ಪಡುತ್ತದೆ .

ಚೋಕ್ಸಿ 2018ರ ಜನವರಿ 1ರಂದು ವಿದೇಶಕ್ಕೆ ತೆರಳಿದ್ದರೆ ಸಿಬಿಐ ಆತನ ವಿರುದ್ಧ ಅಪರಾಧ ಪ್ರಕರಣವನ್ನು 2018ರ ಜನವರಿ 31ರಂದು ದಾಖಲಿಸಿಕೊಂಡಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ. ಇದೀಗ ಕ್ರಿಮಿನಲ್ ಪೂರ್ವಚರಿತ್ರೆ ಪರಿಶೀಲನಾ ಪ್ರಕ್ರಿಯೆಯನ್ನು ಸುಧಾರಿಸುವ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸುತ್ತಿರುವುದಾಗಿ ನಗರ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News