‘ಪಾಕಿಸ್ತಾನಕ್ಕೆ ಹೋಗಿ’ ಎನ್ನುವವರಿಗೆ ಶರದ್ ಪವಾರ್ ಪ್ರತಿಕ್ರಿಯಿಸಿದ್ದು ಹೀಗೆ

Update: 2018-08-05 15:12 GMT

 ಪುಣೆ, ಆ. 5: ಪಾಕಿಸ್ತಾನಕ್ಕೆ ಹೋಗಿ ಎಂದು ಮುಸ್ಲಿಮರಿಗೆ ಹೇಳುತ್ತಿರುವ ವರಿಗೆ ಪಾಕಿಸ್ತಾನ ಹಾಗೂ ಭಾರತದ ಬಗ್ಗೆ ಅರಿವಿಲ್ಲ ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಹೇಳಿದ್ದಾರೆ.

 ಹಿರಿಯ ಪತ್ರಕರ್ತ ಸಂಜಯ್ ಅವಾತೆ ಬರೆದ ‘‘ವಿ ದಿ ಚೇಂಜ್’’ ಪುಸ್ತಕ ಬಿಡುಗಡೆಗೊಳಿಸಿ ಶರದ್ ಪವಾರ್ ರವಿವಾರ ಇಲ್ಲಿ ಮಾತನಾಡಿದರು. ಪಾಕಿಸ್ತಾನ ಅಂದರೆ ಏನು ?, ವಿಭಜನೆಯ ಮುನ್ನ ಅದು ಭಾರತದ ಭಾಗ ಎಂದು ಅವರು ಹೇಳಿದ್ದಾರೆ. ವಿಭಜನೆ ಸಂದರ್ಭ ಪಾಕಿಸ್ತಾನದಲ್ಲಿ ಜೀವಿಸುತ್ತಿದ್ದವರು ಭಾರತೀಯರಾಗಿದ್ದರು. ಅನಂತರ ಎರಡು ದೇಶಗಳ ಜನರು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ತೆರಳಿದರು ಎಂದು ಅವರು ಹೇಳಿದರು. ತಾನು ಅಂತರ್ ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷನಾಗಿದ್ದಾಗ ಹಲವು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದೆ ಎಂದು ಅವರು ತಿಳಿಸಿದ್ದಾರೆ.

‘‘ನಾನು ಪಾಕಿಸ್ತಾನದಲ್ಲಿ ಸಾಮಾನ್ಯ ಜನರನ್ನು ಭೇಟಿಯಾಗಿದ್ದೇನೆ. ಅವರಿಗೆ ಭಾರತೀಯರ ಬಗ್ಗೆ ಪ್ರೀತಿ ಇರುವುದನ್ನು ಗಮನಿಸಿದ್ದೇನೆ. ಭಾರತದಲ್ಲಿ ಸಂಬಂಧಿಕರನ್ನು ಹೊಂದಿರುವ ಜನರು ಪಾಕಿಸ್ತಾನದಲ್ಲಿ ಇದ್ದಾರೆ. ಆದರೆ, ಭಾರತ ಹಾಗೂ ಪಾಕಿಸ್ತಾನದ ನಡುವಿನ ವೈಮನಸ್ಸಿನಿಂದ ಅಲ್ಲಿನ ಜನರಿಗೆ ಭಾರತಕ್ಕೆ ಬರುವ ಅವಕಾಶ ಸಿಗುತ್ತಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News