ಟ್ರಾಫಿಕ್ ಅಪಘಾತದಲ್ಲಿ ಸಾವು ಸಂಭವಿಸಿದರೆ ಚಾಲಕನಿಗೆ ಮರಣದಂಡನೆ

Update: 2018-08-07 17:43 GMT

ಢಾಕ, ಆ. 7: ಟ್ರಾಫಿಕ್ ಅಪಘಾತದಲ್ಲಿ ಸಾವು ಸಂಭವಿಸಿದರೆ ಚಾಲಕನಿಗೆ ಮರಣದಂಡನೆ ವಿಧಿಸುವ ಕಾನೂನು ಬಾಂಗ್ಲಾದೇಶದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಅಮಿತವೇಗದಲ್ಲಿ ಬಂದ ಬಸ್ ಢಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ನಂತರ ಬಾಂಗ್ಲಾದೇಶದಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಈ ಪರಿಸ್ಥಿತಿಯಲ್ಲಿ ಹೊಸ ಕಾನೂನು ನಿರ್ಮಾಣಕ್ಕೆ ಬಾಂಗ್ಲಾದೇಶ ಸರಕಾರ ಮುಂದಾಗಿದೆ.

ಚಾಲಕನ ನಿರ್ಲಕ್ಷ್ಯದಿಂದ ಜನರು ಮೃತಪಡುವ ಸಂದರ್ಭದಲ್ಲಿ ಈವರೆಗೆ ಬಾಂಗ್ಲಾದೇಶದಲ್ಲಿ ಚಾಲಕನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು. ಇದಕ್ಕೆ ತಿದ್ದುಪಡಿ ತಂದು ಮರಣದಂಡನೆ ವಿಧಿಸಲು ಬಾಂಗ್ಲಾದೇಶದ ಕಾನೂನು ಸಚಿವಾಲಯ ನಿರ್ಧರಿಸಿದೆ.

ಬಾಂಗ್ಲಾದೇಶ ರಾಜಧಾನಿ ಢಾಕದಲ್ಲಿ ಅತಿವೇಗದಲ್ಲಿ ಬಂದ ಬಸ್ ಢಿಕ್ಕಿಯಿಂದಾಗಿ 2 ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಇದನ್ನು ಮುಂದಿಟ್ಟು ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಕಾರರ ನಡುವೆ ಹಾದು ಹೋದ ಬಾಂಗ್ಲಾದೇಶದ ಅಮೆರಿಕ ರಾಯಭಾರಿಯ ಕಾರಿಗೂ ಕಲ್ಲೆಸೆಯಲಾಗಿದೆ. 2 ಕಾರುಗಳಿಗೆ ಹಾನಿಯಾಗಿದೆ ಎಂದು ದೂತವಾಸದ ಮೂಲಗಳು ತಿಳಿಸಿವೆ.

ರಸ್ತೆ ಅಪಘಾತಕ್ಕೆ ಮರಣದಂಡನೆ ವಿಧಿಸುವುದು ಜಗತ್ತಿನಲ್ಲಿ ಅಪೂರ್ವವಾಗಿದ್ದು, ವಿದ್ಯಾರ್ಥಿಗಳ ಪ್ರತಿಭಟನೆ ಒಂಬತ್ತನೆ ದಿವಸಕ್ಕೆ ಕಾಲಿಟ್ಟದ್ದರಿಂದ ಈ ಕಾನೂನು ತಿದ್ದುಪಡಿಗೆ ಬಾಂಗ್ಲಾ ಸರಕಾರ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News