ಸರಣಿ ಸಮಬಲಗೊಳಿಸುವ ವಿಶ್ವಾಸದಲ್ಲಿ ಕೊಹ್ಲಿ ಪಡೆ

Update: 2018-08-09 05:08 GMT

ಲಂಡನ್, ಆ.8: ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಗುರುವಾರದಿಂದ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಸೋತಿರುವ ಭಾರತ ಕೆಲವು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದ್ದು, ತನ್ನ ಸ್ಟಾರ್ ಆಟಗಾರರ ಜವಾಬ್ದಾರಿಯುತ ಬ್ಯಾಟಿಂಗ್ ಬೆಂಬಲದಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ ಸರಣಿ ಸಮಬಲಗೊಳಿಸುವ ವಿಶ್ವಾಸದಲ್ಲಿದೆ.

ಮೊದಲ ಟೆಸ್ಟ್‌ನಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಸಹ ಆಟಗಾರರಿಂದ ಸರಿಯಾದ ಬೆಂಬಲ ಲಭಿಸಿದ್ದರೆ ಪಂದ್ಯದ ಚಿತ್ರಣವೇ ಸಂಫೂರ್ಣ ಬದಲಾಗುತ್ತಿತ್ತು. ವಿಶ್ವದ ನಂ.1 ತಂಡ ಭಾರತ ಕೇವಲ 31 ರನ್‌ನಿಂದ ಮೊದಲ ಟೆಸ್ಟ್ ಪಂದ್ಯವನ್ನು ಸೋತಿತ್ತು. ಇಂಗ್ಲೆಂಡ್ ತಂಡ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಸೇವೆಯಿಂದ ವಂಚಿತವಾಗಿದೆ. ಕಳೆದ ವಾರ ಎಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ 31 ರನ್‌ಗಳ ರೋಚಕ ಗೆಲುವು ತಂದುಕೊಟ್ಟಿರುವ ಸ್ಟೋಕ್ಸ್ ನಾಯಕ ವಿರಾಟ್ ಕೊಹ್ಲಿ ಸಹಿತ ಮೂರು ವಿಕೆಟ್ ಕಬಳಿಸಿ ಪ್ರವಾಸಿಗರ ರನ್ ಚೇಸಿಂಗ್‌ಗೆ ಕಡಿವಾಣ ಹಾಕಿದ್ದರು. ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸ್ಟೋಕ್ಸ್ ಇಂಗ್ಲೆಂಡ್ ತಂಡದಿಂದ ದೂರ ಉಳಿದಿದ್ದಾರೆ. ವೇಗದ ಬೌಲಿಂಗ್ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಅಥವಾ ಹಿರಿಯ ಆಲ್‌ರೌಂಡರ್ ಮೊಯಿನ್ ಅಲಿ ಅವರು ಸ್ಟೋಕ್ಸ್‌ರಿಂದ ತೆರವಾದ ಸ್ಥಾನ ತುಂಬಲಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಡೇವಿಡ್ ಮಲಾನ್ ಬದಲಿಗೆ ಸರ್ರೆಯ ಯುವ ಬ್ಯಾಟ್ಸ್‌ಮನ್ ಒಲ್ಲಿ ಪೋಪ್ ಅವಕಾಶ ಪಡೆಯುವುದು ಖಚಿತವಾಗಿದೆ. ಕೊಹ್ಲಿ ಪಡೆ ಅಗ್ರ ಕ್ರಮಾಂಕದಲ್ಲಿ ಬದಲಾವಣೆ ಮಾಡಲು ಚಿಂತಿಸುತ್ತಿದ್ದು, ರನ್ ಬರ ಎದುರಿಸುತ್ತಿರುವ ಆರಂಭಿಕ ಆಟಗಾರ ಶಿಖರ್ ಧವನ್ ಬದಲಿಗೆ ಅನುಭವಿ ಆಟಗಾರ ಚೇತೇಶ್ವರ ಪೂಜಾರ ಆಡುವ 11ರ ಬಳಗ ಸೇರುವ ಸಾಧ್ಯತೆಯಿದೆ.

   ಎಜ್‌ಬಾಸ್ಟನ್‌ನಲ್ಲಿ ಭಾರತ ಬ್ಯಾಟಿಂಗ್ ವಿಭಾಗದಲ್ಲಿ ಸಂಪೂರ್ಣ ವಿಫಲವಾಗಿದ್ದರೂ ಎರಡನೇ ಟೆಸ್ಟ್‌ನಲ್ಲಿ ಹೆಚ್ಚುವರಿ ದಾಂಡಿಗನನ್ನು ಆಡಿಸುವ ಸಾಧ್ಯತೆಯನ್ನು ಬೌಲಿಂಗ್ ಕೋಚ್ ಭರತ್ ಅರುಣ್ ನಿರಾಕರಿಸಿದ್ದಾರೆ. ಎರಡನೇ ಸ್ಪಿನ್ನರ್‌ರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದಿದ್ದಾರೆ. ಇಂತಹ ಸನ್ನಿವೇಶದಲ್ಲಿ ಎಡಗೈ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ ಅಥವಾ ಕುಲ್‌ದೀಪ್ ಯಾದವ್ ಅವಕಾಶ ಪಡೆಯಬಹುದು. ಉಮೇಶ್ ಯಾದವ್ ಅವರು ಇಶಾಂತ್ ಶರ್ಮಾರೊಂದಿಗೆ ತಂಡದಿಂದ ಹೊರಗುಳಿಯುವ ಸಾಧ್ಯತೆಯಿದೆ. ಮುಹಮ್ಮದ್ ಶಮಿ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ವೇಗದ ವಿಭಾಗವನ್ನು ಮುನ್ನಡೆಸಲಿದ್ದಾರೆ.

ಜೂನ್‌ನಲ್ಲಿ ಐರ್ಲೆಂಡ್ ವಿರುದ್ಧದ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದ ವೇಳೆ ಹೆಬ್ಬೆರಳ ಮುರಿತಕ್ಕೊಳಗಾಗಿರುವ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದರು. ಇದೀಗ ಎರಡನೇ ಟೆಸ್ಟ್‌ನಲ್ಲಿ ಆಡುವುದು ಅನುಮಾನ.

  ಕೊಹ್ಲಿ ಪಡೆ ಬ್ಯಾಟಿಂಗ್ ಸರದಿಗೆ ಸಂಬಂಧಿಸಿ ಸಮಸ್ಯೆ ಎದುರಿಸುತ್ತಿದೆ. ಮೊದಲ ಟೆಸ್ಟ್‌ನಲ್ಲಿ ಚೇತೇಶ್ವರ ಪೂಜಾರರನ್ನು ಹೊರಗಿಟ್ಟು ಧವನ್‌ಗೆ ಆದ್ಯತೆ ನೀಡಲಾಗಿತ್ತು. ಮೂರನೇ ಕ್ರಮಾಂಕದಲ್ಲಿ ಭಾರತ ತಂಡ ಪ್ರಯೋಗ ನಡೆಸುತ್ತಾ ಬಂದಿದೆ. 2014-15ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಆಸ್ಟ್ರೇಲಿಯ ವಿರುದ್ಧ ಟೆಸ್ಟ್‌ನಲ್ಲಿ ಪೂಜಾರ ಬದಲಿಗೆ ರೋಹಿತ್ ಶರ್ಮರನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಲಾಗಿತ್ತು.

 ಆಂಗ್ಲರು ಉದಯೋನ್ಮುಖ ಸ್ಟಾರ್ ಆಟಗಾರ ಸ್ಯಾಮ್ ಕರನ್ ಆಲ್‌ರೌಂಡ್ ಆಟದ ನೆರವಿನಿಂದ ಎಜ್‌ಬಾಸ್ಟನ್‌ನಲ್ಲಿ ಆಡಿದ್ದ ತನ್ನ 1000ನೇ ಟೆಸ್ಟ್ ಪಂದ್ಯವನ್ನು ಜಯಿಸಿದ್ದರು. ಎಡಗೈ ಸ್ವಿಂಗ್ ಬೌಲಿಂಗ್ ಮೂಲಕ ಐದು ವಿಕೆಟ್‌ಗಳನ್ನು ಉರುಳಿಸಿದ್ದ ಕರನ್ ಎರಡನೇ ಇನಿಂಗ್ಸ್‌ನಲ್ಲಿ ಮಿಂಚಿನ 63 ರನ್ ಗಳಿಸಿದ್ದರು. ಟೆಸ್ಟ್‌ನಲ್ಲಿ ಮೊದಲ ಅರ್ಧಶತಕ ಸಿಡಿಸಿದ್ದ ಕರನ್ ಭಾರತಕ್ಕೆ ಮೊದಲ ಟೆಸ್ಟ್ ಗೆಲುವಿಗೆ 194 ರನ್ ಗುರಿ ನೀಡಲು ನೆರವಾಗಿದ್ದರು.

ನಾಯಕ ಕೊಹ್ಲಿ 51 ರನ್ ಗಳಿಸಿದ್ದ ಹೊರತಾಗಿಯೂ ಭಾರತಕ್ಕೆ ಗೆಲುವು ದಕ್ಕಲಿಲ್ಲ. ಕೊಹ್ಲಿ ಮೊದಲ ಇನಿಂಗ್ಸ್‌ನಲ್ಲಿ 149 ರನ್ ಗಳಿಸಿ ಇಂಗ್ಲೆಂಡ್ ನೆಲದಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಸಾಧನೆ ಮಾಡಿದ್ದರು.

ಮೊದಲ ಟೆಸ್ಟ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 287 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಅಗ್ರ ರ್ಯಾಂಕಿನ ಭಾರತ 274 ರನ್ ಗಳಿಸಿ ಆತಿಥೇಯರಿಗೆ ಅಲ್ಪ ಮುನ್ನಡೆ ಬಿಟ್ಟುಕೊಟ್ಟಿತ್ತು.

ಬರ್ಮಿಂಗ್‌ಹ್ಯಾಮ್ ಪಿಚ್‌ನಲ್ಲಿ ಭಾರತ ಸ್ವಿಂಗ್ ಆಗುತ್ತಿದ್ದ ಚೆಂಡನ್ನು ಎದುರಿಸಲು ಪರದಾಟ ನಡೆಸಿದರೆ, ಇಂಗ್ಲೆಂಡ್ ಆಟಗಾರರು ಆರ್.ಅಶ್ವಿನ್ ಆಫ್-ಸ್ಪಿನ್ ಬೌಲಿಂಗ್ ಎದುರಿಸಲು ಪರದಾಡಿದರು.

  2017ರ ಜುಲೈನಲ್ಲಿ ರೂಟ್ ನಾಯಕನಾದ ಬಳಿಕ ಇಂಗ್ಲೆಂಡ್ ಆಡಿರುವ 17 ಟೆಸ್ಟ್ ಪಂದ್ಯಗಳಲ್ಲಿ ಕೇವಲ 9 ಶತಕಗಳನ್ನು ಗಳಿಸಲು ಶಕ್ತವಾಗಿದೆ. ಏಳು ಬಾರಿ ಮೊದಲ ಇನಿಂಗ್ಸ್‌ನಲ್ಲಿ 300 ರನ್ ಒಳಗೆ ಅಲೌಟಾ ಗಿದೆ. ಎರಡನೇ ಇನಿಂಗ್ಸ್‌ನಲ್ಲಿ 9 ಬಾರಿ 250ರೊಳಗೆ ಗಂಟುಮೂಟೆ ಕಟ್ಟಿದೆ.

ಹೊಸ ಮುಖ ಪೋಪ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಸರ್ರೆ ತಂಡದ ಪರ 85.50ರ ಸರಾಸರಿಯಲ್ಲಿ 3 ಶತಕಗಳ ಸಹಿತ 684 ರನ್ ಗಳಿಸಿದ್ದಾರೆ. ಪೋಪ್ ಭಾರತ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಮೂಲಕ ಕ್ರಿಕೆಟ್‌ಗೆ ಪಾದಾರ್ಪಣೆಗೈಯ್ಯಲಿದ್ದಾರೆ ಎಂದು ನಾಯಕ ರೂಟ್ ಬುಧವಾರ ದೃಢಪಡಿಸಿದ್ದಾರೆ. ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಇತ್ತೀಚೆಗಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಇದು ಆತಿಥೇಯರಿಗೆ ತಲೆನೋವಿನ ವಿಚಾರವಾಗಿದೆ.

►► ಪಂದ್ಯದ ಸಮಯ
ಅಪರಾಹ್ನ 3:30 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News