ನೀವು ಉಗುಳುವ ಕಫ ನಿಮ್ಮ ಆರೋಗ್ಯದ ಕುರಿತು ಏನು ಹೇಳುತ್ತದೆ ಗೊತ್ತೇ...?

Update: 2018-08-09 10:58 GMT

ಕೆಮ್ಮು ಮತ್ತು ಶೀತದ ಬಾಧೆಯುಂಟಾದಾಗ ಮೂಗು ಸೋರಿಕೆ ಮತ್ತು ಕಫದ ಸಮಸ್ಯೆಯೂ ಜೊತೆಗೆ ಬರುತ್ತದೆ. ಇಲ್ಲದಿದ್ದರೆ ಈ ಲೋಳೆ ನಮ್ಮ ಶರೀರದಲ್ಲಿ ಏನೂ ಸದ್ದುಗದ್ದಲ ಮಾಡದೆ ಮೌನವಾಗಿರುತ್ತದೆ. ಸಿಂಬಳ ಕೆಟ್ಟದ್ದೇನೂ ಅಲ್ಲ,ಏಕೆಂದರೆ ಅದೂ ಶರೀರಕ್ಕೆ ಮುಖ್ಯವಾಗಿದೆ. ಅದು ಸೈನಸ್‌ಗಳು, ಗಂಟಲು,ಶ್ವಾಸಕೋಶಗಳು,ಮೂಗು ಮತ್ತು ಬಾಯಿಯ ಅಂಗಾಂಶಗಳ ಪಾಲಿಗೆ ಗ್ರೀಸ್‌ನಂತೆ ಕೆಲಸ ಮಾಡುತ್ತದೆ. ಅಂಟಂಟಾಗಿರುವ ಅದು ರೋಗ ಪ್ರತಿರೋಧಕಗಳು,ಪ್ರೋಟಿನ್‌ಗಳು ಮತ್ತು ಕಿಣ್ವಗಳನ್ನು ಒಳಗೊಂಡಿದ್ದು, ಬ್ಯಾಕ್ಟೀರೀಯಾಗಳು ಅದರಲ್ಲಿ ಸಿಕ್ಕಿಕೊಂಡು ಸಾಯುತ್ತವೆ ಮತ್ತು ಧೂಳಿನಂತಹ ಮಾಲಿನ್ಯಗಳು ನಮ್ಮ ಶರೀರವನ್ನು ಪ್ರವೇಶಿಸುವುದನ್ನು ತಡೆಯುತ್ತದೆ. ಆದರೆ ಕಫದ ವಿಷಯವೇ ಬೇರೆ. ಅದು ನಮ್ಮ ಆರೋಗ್ಯದ ಬಗ್ಗೆ ಬಹಳಷ್ಟನ್ನು ಹೇಳುತ್ತದೆ.

ನೀವು ಅನಾರೋಗ್ಯ ಅಥವಾ ಯಾವುದೇ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿಲ್ಲವಾದರೆ ಹೆಚ್ಚಿನ ಸಂದರ್ಭಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕಫ ಉತ್ಪತ್ತಿಯಾಗುವುದಿಲ್ಲ. ಆದರೆ ನೀವು ಕೆಮ್ಮಿನೊಂದಿಗೆ ಕಫವನ್ನು ಉಗುಳಿದರೆ ಅದು ಆರೋಗ್ಯ ಸಮಸ್ಯೆಯನ್ನು ಸೂಚಿಸಬಹುದು ಮತ್ತು ಕಫದ ಬಣ್ಣ ನಿಮ್ಮ ದೇಹಸ್ಥಿತಿಯ ಬಗ್ಗೆ ಹೇಳುತ್ತದೆ. ಕಫದ ವಿವಿಧ ಬಣ್ಣಗಳು ಮತ್ತು ಅವು ಏನನ್ನು ಸೂಚಿಸುತ್ತವೆ ಎನ್ನುವ ಮಾಹಿತಿ ಇಲ್ಲಿದೆ.......

ಪಾರದರ್ಶಕ ಕಫ: ಹೆಚ್ಚಿನ ಸಂದರ್ಭಗಳಲ್ಲಿ ಪಾರದರ್ಶಕ ಕಫ ಯಾವುದೇ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರುವುದಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಅದು ಶರೀರದಲ್ಲಿಯ ವೈರಲ್ ಸೋಂಕು ಅಥವಾ ಅಲರ್ಜಿಯಿಂದ ಉಂಟಾಗುವ ಮೂಗು ಸೋರಿಕೆಯನ್ನು ಸೂಚಿಸುತ್ತದೆ. ಪಾರದರ್ಶಕ ಕಫ ಹೆಚ್ಚಾಗಿ ಹೊರಬಂದರೆ ಅದು ಶರೀರವು ವಿಷಕಾರಿ ಜೀವಾಣುಗಳನ್ನು ಹೊರಗೆ ಹಾಕುತ್ತಿದೆಯೆಂದು ತಿಳಿದುಕೊಳ್ಳಬಹುದು.

ಬಿಳಿಯ ಬಣ್ಣದ ಕಫ: ಕಫವು ದಪ್ಪವಾಗಿ,ಬಿಳಿಯ ಬಣ್ಣವನ್ನು ಹೊಂದಿದ್ದರೆ ಅದು ವೈರಲ್ ಸೋಂಕನ್ನು ಸೂಚಿಸುತ್ತದೆ. ಅದು ಬ್ರಾಂಕೈಟಿಸ್(ಶ್ವಾಸನಾಳಗಳ ಒಳಪೊರೆಯ ಊತ) ಅಥವಾ ದೀರ್ಘಕಾಲೀನ ಶ್ವಾಸಕೋಶ ಕಾಯಿಲೆಯನ್ನೂ ಸೂಚಿಸಬಹುದು. ಆದರೆ ಅದು ಬ್ಯಾಕ್ಟೀರಿಯಾ ಸೋಂಕು ಆಗಿ ಅಭಿವೃದ್ಧಿಗೊಂಡರೆ ಕಫದ ಬಣ್ಣವು ಹಸಿರು ಅಥವಾ ಹಳದಿಗೆ ತಿರುಗಬಹುದು.

ಹಸಿರು ಬಣ್ಣದ ಕಫ: ರೋಗ ನಿರೋಧಕ ಕೋಶಗಳಾಗಿರುವ ಬಿಳಿಯ ರಕ್ತಕಣಗಳು ಹಸಿರು ಬಣ್ಣದ ಕಿಣ್ವವನ್ನು ಒಳಗೊಂಡಿರುತ್ತವೆ. ಬಿಳಿಯ ರಕ್ತಕಣಗಳು ಯಾವುದೇ ರೋಗದ ವಿರುದ್ಧ ಗುಂಪಾಗಿ ಹೋರಾಡುತ್ತವೆ ಮತ್ತು ಇದರಿಂದಾಗಿ ಸಾಮಾನ್ಯವಾಗಿ ಪಾರದರ್ಶಕವಾಗಿರುವ ಕಫವು ಹಸಿರು ಛಾಯೆಯನ್ನು ಪಡೆದುಕೊಳ್ಳುತ್ತದೆ. ಹಸಿರು ಕಫವು ಶೀತ,ಸೈನುಸಿಟಿಸ್ ಮತ್ತು ನ್ಯುಮೋನಿಯಾದ ಲಕ್ಷಣವಾಗಿರಬಹುದು.

ಹಳದಿ ಕಫ: ಕಫದ ಬಣ್ಣ ಹಳದಿಯಾಗಿದ್ದರೆ ಅದು ಶರೀರವು ಸೋಂಕಿನ ವಿರುದ್ಧ ಹೋರಾಡುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಹಳದಿ ಕಫವು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕಿನ ಲಕ್ಷಣವಾಗಿರುತ್ತದೆ,ಆದರೆ ಅದು ಸದಾ ಇದೊಂದನ್ನೇ ಸೂಚಿಸುವುದಿಲ್ಲ. ಅದು ಬ್ರಾಂಕೈಟಿಸ್,ನ್ಯುಮೋನಿಯಾ ಮತ್ತು ಸಿಸ್ಟಿಕ್ ಫೈಬ್ರೋಸಿಸ್‌ನ ಲಕ್ಷಣವೂ ಆಗಿದೆ.

ಕೆಂಪುಬಣ್ಣದ ಕಫ: ಕಫವು ಕೆಂಪು ಅಥವಾ ತುಕ್ಕಿನ ಬಣ್ಣವನ್ನು ಹೊಂದಿದ್ದರೆ ಅದು ಚಿಂತಿಸುವ ವಿಷಯವಾಗುತ್ತದೆ. ಅದು ಕಫದಲ್ಲಿ ರಕ್ತವನ್ನು ಸೂಚಿಸುತ್ತದೆ. ಅದು ಆರಂಭದಲ್ಲಿ ಪಾರದರ್ಶಕವಾಗಿರಬಹುದು,ಆದರೆ ಕ್ರಮೇಣ ರಕ್ತದ ಕರೆಗಳು ಕಾಣಿಸಿಕೊಂಡು ಕಂದು ಅಥವಾ ಕೆಂಪುಬಣ್ಣಕ್ಕೆ ತಿರುಗಬಹುದು. ಬ್ಯಾಕ್ಟೀರಿಯಾಗಳ ಸೋಂಕಿನಿಂದ ಉಂಟಾಗುವ ನ್ಯುಮೋನಿಯಾ,ಬ್ರಾಂಕೈಟಿಸ್,ಸಿಸ್ಟಿಕ್ ಫೈಬ್ರೋಸಿಸ್ ಮತ್ತು ಶ್ವಾಸಕೋಶಗಳ ಊತ ಕೆಂಪುಬಣ್ಣದ ಕಫಕ್ಕೆ ಕಾರಣಗಳಾಗಿವೆ.

ಕಪ್ಪುಬಣ್ಣದ ಕಫ: ವೈದ್ಯಕೀಯ ಭಾಷೆಯಲ್ಲಿ ಮೆಲಾನೊಪ್ಟಿಸಿಸ್ ಎಂದು ಕರೆಯಲಾಗುವ ಕಪ್ಪುಬಣ್ಣದ ಕಫವು,ವಿಶೇಷವಾಗಿ ನೀವು ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರೆ,ಹೊಗೆ ಅಥವಾ ಧೂಳಿನ ಸೇವನೆಯನ್ನು ಸೂಚಿಸುತ್ತದೆ. ಧೂಮ್ರಪಾನ ಮತ್ತು ಮಾದಕ ದ್ರವ್ಯ ಸೇವನೆಯಿಂದಾಗಿಯೂ ಕಫವು ಕಪ್ಪುಬಣ್ಣಕ್ಕೆ ತಿರುಗುತ್ತದೆ. ನ್ಯುಮೋನಿಕೋನಿಯಾಸಿಸ್ ಅಥವಾ ಕಪ್ಪು ಶ್ವಾಸಕೋಶ ರೋಗ ಮತ್ತು ಶಿಲೀಂಧ್ರ ಸೋಂಕು ಕೂಡ ಕಪ್ಪುಬಣ್ಣದ ಕಫವನ್ನುಂಟು ಮಾಡುತ್ತವೆ.

ಕಫದ ಬಣ್ಣ ಯಾವುದೇ ಆಗಿರಲಿ,ಮೂರು ವಾರಗಳಿಗೂ ಅಧಿಕ ಕಾಲದಿಂದ ಕೆಮ್ಮು ನಿಮ್ಮನ್ನು ಕಾಡುತ್ತಿದ್ದರೆ ಅಥವಾ ಕೆಮ್ಮು ಮತ್ತು ಶೀತವಲ್ಲದೆ ಇತರ ಲಕ್ಷಣಗಳಿದ್ದರೆ ಆದಷ್ಟು ಶೀಘ್ರ ವೈದ್ಯರನ್ನು ಕಾಣುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News