ಡೌನ್‌ಟಿಸಂ:ಇದು ಭಿನ್ನ ಸಾಮರ್ಥ್ಯದ ವ್ಯಕ್ತಿಗಳು ನಡೆಸುತ್ತಿರುವ ವರ್ಣರಂಜಿತ ಕೆಫೆ !

Update: 2018-08-10 12:12 GMT

ಆ ಆಕರ್ಷಕ ಕೆಫೆಯ ಒಂದು ಮೂಲೆಯಲ್ಲಿರುವ ಪಿಯಾನೊದೆದುರು ಕುಳಿತಿರುವ ಮೆಲಿಕಾ ಆಘಾಯೀ ತನ್ನ ಬೆರಳುಗಳನ್ನು ನಿಧಾನವಾಗಿ ಅದರ ಮೇಲೆ ಆಡಿಸುತ್ತ ಮೆಲುದನಿಯಲ್ಲಿ ಮಕ್ಕಳ ಗೀತೆಯೊಂದನ್ನ ಹಾಡುತ್ತಿದ್ದರೆ ಗ್ರಾಹಕರು ಅದರ ಮಾಧುರ್ಯವನ್ನು ಆಸ್ವಾದಿಸುತ್ತಿದ್ದರು ಮತ್ತು ಮೆಹ್ದಿ ಖಾಕಿಯಾನ್ ಅವರಿಂದ ಖಾದ್ಯ ಮತ್ತ ಪೇಯಗಳ ಆರ್ಡರ್‌ಗಳನ್ನು ಸ್ವೀಕರಿಸುವಲ್ಲಿ ವ್ಯಸ್ತನಾಗಿದ್ದ.

ಇದರಲ್ಲಿ ವಿಶೇಷವೇನಿದೆ ಎಂದು ಮೂಗು ಮುರಿಯಬೇಕಿಲ್ಲ. ಡೌನ್‌ಟಿಸಂ ಕೆಫೆ ಇರುವುದು ಇರಾನಿನ ರಾಜಧಾನಿ ತೆಹರಾನ್‌ನ ಜನನಿಬಿಡ ವಾನಕ್ ಸ್ಕ್ವೇರ್‌ನಲ್ಲಿ. ಇದು ಆ ಪ್ರದೇಶದಲ್ಲಿನ ಇತರ ಕಾಫಿಶಾಪ್‌ಗಳಿಗಿಂತ ವಿಶಿಷ್ಟವಾಗಿದೆ. ಹೌದು,ಈ ಡೌನ್‌ಟಿಸಂ ಕೆಫೆಯನ್ನು ನಡೆಸುತ್ತಿರುವವರು ಭಿನ್ನ ಸಾಮರ್ಥ್ಯದ ವ್ಯಕ್ತಿಗಳು ಮತ್ತು ಇದು ಇರಾನ್‌ನಲ್ಲಿ ಇಂತಹ ಮೊದಲ ಕೆಫೆಯಾಗಿದೆ.

ಈ ಕೆಫೆಯ ಜವಾಬ್ದಾರಿ ಹೊತ್ತಿರುವ ಎಲ್ಲ ಎಂಟೂ ಜನರು ಡೌನ್ ಸಿಂಡ್ರೋಮ್ ಅಥವಾ ಆಟಿಸಂ ಇರುವ ವ್ಯಕ್ತಿಗಳೇ ಆಗಿದ್ದಾರೆ ಮತ್ತು ಇತರ ಯಾರದೇ ನೆರವಿಲ್ಲದೆ ಕೆಫೆಯ ಎಲ್ಲ ಕೆಲಸಗಳನ್ನು ಸ್ವತಃ ನಿರ್ವಹಿಸುತ್ತಿದ್ದಾರೆ.

‘ಡೌನ್’ ಮತ್ತು ‘ಆಟಿಸಂ’ ಶಬ್ದಗಳ ಸಂಯೋಜನೆಯಾದ ಡೌನ್‌ಟಿಸಂ ಕೆಫೆ ಕಳೆದ ಮೇ ತಿಂಗಳಲ್ಲಿ ಆರಂಭಗೊಂಡಿದ್ದು,ಕೇವಲ ಮೂರೇ ತಿಂಗಳುಗಳಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

  2015ರ ಪರಮಾಣು ಒಪ್ಪಂದದಡಿ ತೆರವುಗೊಂಡಿದ್ದ ಇರಾನ್ ಮೇಲಿನ ಅಮೆರಿಕದ ನಿರ್ಬಂಧಗಳು ಮತ್ತೆ ಹೇರಲ್ಪಡುವುದರೊಂದಿಗೆ ಮತ್ತು ನಿರುದ್ಯೋಗದ ಪ್ರಮಾಣ ಶೇ.12.5ಕ್ಕೆ ಹೆಚ್ಚುವುದರೊಂದಿಗೆ ಈ ದೇಶದಲ್ಲಿ ಉದ್ಯೋಗ ಹುಡುಕಿಕೊಳ್ಳುವುದು ತುಂಬ ಕಷ್ಟದ ಕೆಲಸವಾಗಿದೆ. ಅದರಲ್ಲೂ ಅಂಗವಿಕಲರು ಮತ್ತು ಭಿನ್ನ ಸಾಮರ್ಥ್ಯದವರು ಉದ್ಯೋಗದ ಕನಸನ್ನೂ ಕಾಣಲು ಸಾಧ್ಯವಾಗುತ್ತಿಲ್ಲ.

ಆದರೆ ಡೌನ್‌ಟಿಸಂ ಕೆಫೆ ಭಿನ್ನ ಸಾಮರ್ಥ್ಯದ ವ್ಯಕ್ತಿಗಳಿಗೆ ಕೆಲಸ ಒದಗಿಸಿರುವುದು ಮಾತ್ರವಲ್ಲ,ಅವರು ಜವಾಬ್ದಾರಿಯನ್ನು ನಿರ್ವಹಿಸಲೂ ಸಮರ್ಥರು ಎನ್ನುವುದನ್ನೂ ರುಜುವಾತುಗೊಳಿಸಿದೆ ಎನ್ನುತ್ತಾರೆ ಈ ಪರಿಕಲ್ಪನೆಯ ರೂವಾರಿಯಾಗಿರುವ ಸಂಗೀತಕಾರ್ತಿ ಆಯ್ಲಿನ್ ಆಘಾಹಿ.

ಭಿನ್ನ ಸಾಮರ್ಥ್ಯದವರಿಗಾಗಿ ಕೆಫೆಯನ್ನು ರೂಪಿಸುವ ಪರಿಕಲ್ಪನೆ ಅವರಿಗೆ ಮೊದಲು ಹೊಳೆದಿದ್ದು 2016ರಲ್ಲಿ. ಅದನ್ನು ಸಾಕಾರಗೊಳಿಸಲು ಶ್ರಮಿಸಿದ ಅವರು ತನ್ನ 10 ವಿದ್ಯಾರ್ಥಿಗಳ ಕುಟುಂಬಗಳ ನೆರವು ಮತ್ತು ಇರಾನ್ ಸರಕಾರದ ಸಮಾಜ ಕಲ್ಯಾಣ ಸಂಸ್ಥೆಯಿಂದ ಸ್ವಲ್ಪ ಆರ್ಥಿಕ ನೆರವಿನ ಬಲದೊಂದಿಗೆ ಕಳೆದ ಮೇ 1ರಂದು ಡೌನ್‌ಟಿಸಂ ಕೆಫೆಯನ್ನು ಆರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಫೆಯ ಸಿಬ್ಬಂದಿಗಳಿಗಾಗಿ ವೃತ್ತಿಪರರಿಂದ ಒಂದು ತಿಂಗಳು ತರಬೇತಿ ಕೊಡಿಸಿದ ಆಘಾಹಿ ಆರಂಭದಲ್ಲಿ 10 ಸಿಬ್ಬಂದಿಗಳನ್ನು ನಿಯೋಜಿಸಿದ್ದರು. ಮೂರೇ ತಿಂಗಳಲ್ಲಿ ಇವರ ಸಂಖ್ಯೆ 40ಕ್ಕೇರಿದೆ. ಹೆಚ್ಚಿನವರು ಹದಿಹರೆಯದವರಾಗಿದ್ದು,ಇತರರು 20ರ ಪ್ರಾಯದವರಾಗಿದ್ದಾರೆ. ಇವರೆಲ್ಲ ದಿನಕ್ಕೆ ಮೂರು ಗಂಟೆಯಂತೆ ಪಾಳಿಗಳಲ್ಲಿ ದುಡಿಯುತ್ತಾರೆ.

ಇಲ್ಲಿಯ ಸಿಬ್ಬಂದಿಗಳು ಕನಿಷ್ಠ ವೇತನವನ್ನು ಪಡೆಯುತ್ತಾರೆ ಮತ್ತು ಗ್ರಾಹಕರು ಖುಷಿಯಿಂದ ನೀಡುವ ಟಿಪ್ಸ್ ಹಣವನ್ನು ತಿಂಗಳ ಅಂತ್ಯಕ್ಕೆ ಎಲ್ಲರೂ ಸಮಾನವಾಗಿ ಹಂಚಿಕೊಳ್ಳುತ್ತಾರೆ.

 ಇತರ ಕೆಫೆಗಳಲ್ಲಿ ಮಂದ ಬೆಳಕಿದ್ದರೆ ಈ ಕೆಫೆಯಲ್ಲಿ ಉಜ್ವಲ ಬೆಳಕಿನ ವ್ಯವಸ್ಥೆಯಿದೆ . ಪ್ರವೇಶದ್ವಾರ ಮತ್ತು ಗೋಡೆಗಳು ಉಜ್ವಲ ಬಣ್ಣಗಳ ಜೊತೆಗೆ ಸಿಬ್ಬಂದಿಗಳೇ ರಚಿಸಿದ ವರ್ಣ ಕಲಾಕೃತಿಗಳು ಮತ್ತು ಬಲೂನುಗಳಿಂದ ಅಲಂಕೃತಗೊಂಡಿವೆ.

ಈ ಕೆಫೆಯಲ್ಲಿನ ಮೆನು ಸದ್ಯಕ್ಕೆ ಕಾಫಿ,ಸಾಂಪ್ರದಾಯಿಕ ಪೇಯಗಳು ಮತ್ತು ಕೇಕ್‌ಗಳಿಗೆ ಸೀಮಿತಗೊಂಡಿದೆ,ಆದರೆ ಶೀಘ್ರವೇ ಇತರ ಖಾದ್ಯಗಳು ಮತ್ತು ಊಟವನ್ನು ಗ್ರಾಹಕರಿಗೆ ಒದಗಿಸಲು ಸಜ್ಜಾಗುತ್ತಿದೆ.

14ರ ಹರೆಯದ ಮೆಲಿಕಾ ಆಘಾಯೀ ಈ ಕೆಫೆಯ ಅತ್ಯಂತ ಕಿರಿಯ ಉದ್ಯೋಗಿಯಾಗಿದ್ದಾಳೆ. ಕೆಫೆ ಆರಂಭಗೊಂಡು ಕೇವಲ ಮೂರೇ ತಿಂಗಳುಗಳಾಗಿದ್ದರೂ ದುಡಿಮೆಯ ಬೆಲೆ ಆಕೆಯ ಆತ್ಮ ಗೌರವವನ್ನು ಹೆಚ್ಚಿಸಿದೆ. ತಾನು ಇತರ ಸಾಮಾನ್ಯ ವ್ಯಕ್ತಿಗಳಿಗಿಂತ ಕಡಿಮೆಯಲ್ಲ ಎಂಬ ವಿಶ್ವಾಸ ಆಕೆಯಲ್ಲಿ ಬೆಳೆಯುತ್ತಿದೆ.

ತಮ್ಮ ಮಕ್ಕಳಲ್ಲಿ ಅಗಾಧ ಬದಲಾವಣೆಗಳನ್ನು ಗಮನಿಸಿರುವ ಇತರ ಯುವ ಸಿಬ್ಬಂದಿಗಳ ಕುಟುಂಬ ಸದಸ್ಯರೂ ಅವರನ್ನು ಉತ್ತೇಜಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News