ಎಸ್‌ಬಿಐಯಿಂದ ಸತತ ಮೂರನೇ ತ್ರೈಮಾಸಿಕದಲ್ಲೂ ನಷ್ಟ ದಾಖಲು

Update: 2018-08-10 16:09 GMT

ಹೊಸದಿಲ್ಲಿ, ಆ.10: ಭಾರತೀಯ ಸ್ಟೇಟ್ ಬ್ಯಾಂಕ್ ಶುಕ್ರವಾರ ಬಿಡುಗಡೆ ಮಾಡಿದ ಮೂರನೇ ತ್ರೈಮಾಸಿಕ ವರದಿಯಲ್ಲಿ ನಿರೀಕ್ಷೆಗೂ ಮೀರಿದ ನಷ್ಟವನ್ನು ದಾಖಲಿಸಿದೆ.

ಕೆಟ್ಟ ಸಾಲಗಳ ಅನುಪಾತ ಉತ್ತಮಗೊಂಡಿರುವ ಕಾರಣ ಬ್ಯಾಂಕ್‌ನ ಶೇರುಗಳಲ್ಲಿ ಏರಿಕೆಯಾಗಿದ್ದರೂ ದೇಶದ ಅತೀದೊಡ್ಡ ಬ್ಯಾಂಕ್ ಎಂದು ಪರಿಗಣಿಸಲ್ಪಟ್ಟಿರುವ ಎಸ್‌ಬಿಐ ನಷ್ಟಗಳನ್ನು ಸರಿದೂಗಿಸಲು ನಡೆಸುತ್ತಿರುವ ಪ್ರಯತ್ನಗಳಿಂದಾಗಿ ಸತತ ಮೂರನೇ ತ್ರೈಮಾಸಿಕದಲ್ಲೂ ನಷ್ಟವನ್ನು ದಾಖಲಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೂನ್ ಮೂವತ್ತಕ್ಕೆ ಕೊನೆಯಾದ ಮೂರನೇ ತ್ರೈಮಾಸಿಕದಲ್ಲಿ ಎಸ್‌ಬಿಐ 4,876 ಕೋಟಿ ರೂ. ನಷ್ಟ ದಾಖಲಿಸಿದೆ.

ಕಳೆದ ವರ್ಷ ಇದೇ ವೇಳೆ ಬ್ಯಾಂಕ್ 2,006 ಕೋಟಿ ರೂ. ಲಾಭ ದಾಖಲಿಸಿತ್ತು. ಮಾರ್ಚ್ ತ್ರೈಮಾಸಿಕದಲ್ಲಿ ಎಸ್‌ಬಿಐ ದಾಖಲೆಯ 7,718 ಕೋಟಿ ರೂ. ನಷ್ಟ ದಾಖಲಿಸಿತ್ತು. ತಜ್ಞರ ಪ್ರಕಾರ, ಸದ್ಯ ಬ್ಯಾಂಕ್ ದಾಖಲಿಸಿರುವ ನಷ್ಟ ನಿರೀಕ್ಷಿತ 171 ಕೋಟಿ ರೂ.ಗಿಂತ ಸಾಕಷ್ಟು ಹೆಚ್ಚಾಗಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ ಒಟ್ಟಾರೆ ಸಾಲಗಳಲ್ಲಿ ಕೆಟ್ಟ ಸಾಲಗಳ ಪ್ರಮಾಣವು ಶೇ. 10.91ರಿಂದ ಶೇ. 10.69ಕ್ಕೆ ಇಳಿದಿತ್ತು. ಆದರೆ ಅದೂ ಕಳೆದ ವರ್ಷ ದಾಖಲಿಸಿದ ಶೇ.9.97ಕ್ಕಿಂತ ಹೆಚ್ಚಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಕೆಟ್ಟ ಸಾಲಗಳ ಕಾರಣದಿಂದ ಭಾರತೀಯ ಬ್ಯಾಂಕ್‌ಗಳು ನಷ್ಟವನ್ನು ದಾಖಲಿಸುತ್ತಿವೆ. ಮಾರ್ಚ್ ಅಂತ್ಯದ ವೇಳೆಗೆ ಬ್ಯಾಂಕ್‌ಗಳಲ್ಲಿ 10.36ಲಕ್ಷ ಕೋಟಿ ರೂ. ಕೆಟ್ಟ ಸಾಲಗಳು ಇದ್ದವು. ಇದರಲ್ಲಿ ಎಸ್‌ಬಿಐಯಂಥ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪಾಲೇ ಶೇ.86ರಷ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News