ಅಮೆರಿಕದಿಂದ ‘ಬಾಹ್ಯಾಕಾಶ ಪಡೆ’: ಉಪಾಧ್ಯಕ್ಷ ಮೈಕ್ ಪೆನ್ಸ್ ಘೋಷಣೆ
ವಾಶಿಂಗ್ಟನ್, ಆ. 10: ಅಮೆರಿಕ ಸೇನೆಯ ಆರನೇ ಶಾಖೆಯಾಗಿ ‘ಬಾಹ್ಯಾಕಾಶ ಪಡೆ’ಯೊಂದನ್ನು ಸ್ಥಾಪಿಸುವ ಯೋಜನೆಯನ್ನು ಉಪಾಧ್ಯಕ್ಷ ಮೈಕ್ ಪೆನ್ಸ್ ಗುರುವಾರ ಘೋಷಿಸಿದ್ದಾರೆ.
‘‘ಅಮೆರಿಕದ ಬಾಹ್ಯಾಕಾಶ ಪಡೆಯನ್ನು ಸ್ಥಾಪಿಸುವ ಸಮಯ ಸನ್ನಿಹಿತವಾಗಿದೆ’’ ಎಂದು ಅಮೆರಿಕದ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಪೆಂಟಗನ್‌ನಲ್ಲಿ ಮಾಡಿದ ಭಾಷಣದಲ್ಲಿ ಅವರು ಹೇಳಿದರು.
‘‘ಹಿಂದೆ ನಾವು ಮಾಡಿದಂತೆಯೇ, ಹೊರಹೊಮ್ಮುತ್ತಿರುವ ನೂತನ ಬೆದರಿಕೆಗಳನ್ನು ಅಮೆರಿಕವು ಈ ಹೊಸ ಯುದ್ಧರಂಗದ ಮೂಲಕ ಎದುರಿಸಲಿದೆ’’ ಎಂದರು.
ನೂತನ ಸೇನಾ ಶಾಖೆಯು ವರ್ಷಾಂತ್ಯದ ವೇಳೆಗೆ ಪ್ರತ್ಯೇಕ ಕಮಾಂಡನ್ನು ಹೊಂದಲಿದೆ.
‘‘ಇನ್ನು ನೇರವಾಗಿ ಬಾಹ್ಯಾಕಾಶ ಪಡೆಯತ್ತ!’’ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ಯೂಜರ್ಸಿಯಲ್ಲಿರುವ ತನ್ನ ರಿಸಾರ್ಟ್‌ನಿಂದ ಟ್ವೀಟ್ ಮಾಡಿದ್ದಾರೆ.
ಟ್ರಂಪ್‌ರ ಕನಸಿನ ಪಡೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಉನ್ನತ ಸೇನಾ ನಾಯಕರ ಸಲಹೆಗಳನ್ನು ತಿರಸ್ಕರಿಸಿ, ಪ್ರತ್ಯೇಕ ಬಾಹ್ಯಾಕಾಶ ಕಮಾಂಡ್ ಸ್ಥಾಪನೆಯತ್ತ ದಾಪುಗಾಲಿಟ್ಟಿದ್ದಾರೆ.
ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್, ಸೆನೆಟ್ ಸಶಸ್ತ್ರ ಸೇವೆಗಳ ಸಮಿತಿ ಮುಖ್ಯಸ್ಥ ಸೆನೆಟರ್ ಜಾನ್ ಮೆಕೇನ್‌ರಿಗೆ ಬರೆದ ಪತ್ರವೊಂದರಲ್ಲಿ ನೂತನ ಕಮಾಂಡ್ ರಚನೆಯ ಪ್ರಸ್ತಾಪವನ್ನು ವಿರೋಧಿಸಿದ್ದರು.
ಸಶಸ್ತ್ರ ಪಡೆಗಳ ಆರನೇ ಶಾಖೆಯಾಗಿ ಬಾಹ್ಯಾಕಾಶ ಪಡೆಯನ್ನು ಸ್ಥಾಪಿಸಲು ಅಗತ್ಯವಾದ ಪ್ರಕ್ರಿಯೆಯನ್ನು ತಾನು ತಕ್ಷಣ ಆರಂಭಿಸಬೇಕಾಗಿದೆ ಎಂದು ಟ್ರಂಪ್ ಜೂನ್‌ನಲ್ಲಿ ಹೇಳಿದ್ದರು.