ಕನ್ವಾರಿಯಾ ದಾಂಧಲೆ ಬಗ್ಗೆ ಸುಪ್ರೀಂ ಗರಂ: ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಆದೇಶ

Update: 2018-08-10 16:34 GMT

ಹೊಸದಿಲ್ಲಿ, ಆ. 10: ಕನ್ವರ್ ಯಾತ್ರೆ ಹೆಸರಿನಲ್ಲಿ ಗೂಂಡಾಗಿರಿ ನಡೆಸುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ದಾಂಧಲೆಯಲ್ಲಿ ತೊಡಗಿರುವ ಹಾಗೂ ಕಾನೂನು ಕೈಗೆತ್ತಿಕೊಳ್ಳುವ ‘ಕನ್ವಾರಿಯಾ’ಗಳ ವಿರುದ್ಧ ಕಠಿಮ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶಿಸಿದೆ.

 ದೇಶಾದ್ಯಂತ ನಡೆಯುವ ಪ್ರತಿಭಟನೆ ಸಂದರ್ಭ ವಿವಿಧ ಗುಂಪುಗಳು ಖಾಸಗಿ ಹಾಗೂ ಸಾರ್ವಜನಿಕ ಸೊತ್ತುಗಳ ಮೇಲಿನ ದಾಳಿ ಘಟನೆಗಳನ್ನು ಸುಪ್ರೀಂ ಕೋರ್ಟ್ ‘ಗಂಭೀರ’ ಎಂದು ಹೇಳಿದೆ ಹಾಗೂ ಅದಕ್ಕಾಗಿ ಕಾನೂನು ತಿದ್ದುಪಡಿ ಆಗುವವರೆಗೆ ಸರಕಾರ ಕಾಯಬೇಕಿಲ್ಲ ಎಂದಿದೆ. ಈ ವಿಷಯದ ಕುರಿತು ನಿರ್ದೇಶನ ನೀಡಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ ಹೇಳಿದೆ.

ದಾಂಧಲೆ ಹಾಗೂ ಗಲಭೆ ಪ್ರಕರಣಗಳಲ್ಲಿ ಆ ಪ್ರದೇಶದ ಪೊಲೀಸ್ ಅಧೀಕ್ಷರಂತಹ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಬೇಕು ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಪೀಠಕ್ಕೆ ತಿಳಿಸಿದರು. ದೇಶದಲ್ಲಿ ಒಂದಲ್ಲ ಒಂದು ಭಾಗದಲ್ಲಿ ಪ್ರತಿ ವಾರ ಹಿಂಸಾತ್ಮಕ ಪ್ರತಿಭಟನೆ ಹಾಗೂ ಗಲಭೆಯಂತಹ ಘಟನೆಗಳನ್ನು ನಡೆಯುತ್ತಿವೆ ಎಂದು ಹೇಳಿದ ಅವರು, ಮಹಾರಾಷ್ಟ್ರದಲ್ಲಿ ನಡೆದ ಮರಾಠಾ ಮೀಸಲಾತಿ ಪ್ರತಿಭಟನೆ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ದೇಶಾದ್ಯಂತ ನಡೆದ ಹಿಂಸಾಚಾರ ಹಾಗೂ ಇತ್ತೀಚೆಗಿನ ‘ಕನ್ವಾರಿಯಾಸ್’ ಹಿಂಸಾಚಾರದ ಘಟನೆಗಳನ್ನು ಉಲ್ಲೇಖಿಸಿದರು.

 ಪದ್ಮಾವತ್ ಚಿತ್ರ ಬಿಡುಗಡೆಯಾದಾಗ, ನಟಿಯ ಮೂಗನ್ನು ಕತ್ತರಿಸುವುದಾಗಿ ಒಂದು ಗುಂಪು ಬೆದರಿಕೆ ಒಡ್ಡಿತ್ತು ಎಂದು ಹೇಳಿದ ಅವರು, ‘‘ಏನೂ ನಡೆಯಲಿಲ್ಲ. ಪ್ರಥಮ ಮಾಹಿತಿ ವರದಿ ದಾಖಲಾಗಲಿಲ್ಲ’’ ಎಂದರು. ಅದಕ್ಕೆ ಸುಪ್ರೀಂ ಕೋರ್ಟ್, ‘‘ಹಾಗಾದರೆ ನಿಮ್ಮ ಸಲಹೆ ಏನು’’ ಎಂದು ಅಟಾರ್ನಿ ಅವರನ್ನು ಪ್ರಶ್ನಿಸಿತು. ‘‘ಸಂಬಂಧಿತ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿ. ಇಂತಹ ಪ್ರತಿಭಟನೆಗಳನ್ನು ಹತ್ತಿಕ್ಕಲು ಸರಕಾರ ಈಗಿರುವ ಕಾನೂನಿಗೆ ತಿದ್ದುಪಡಿ ತರಲು ಚಿಂತಿಸುತ್ತಿದೆ. ಕಾನೂನನ್ನು ಸೂಕ್ತವಾಗಿ ಬದಲಾಯಿಸಲು ನ್ಯಾಯಾಲಯ ಅವಕಾಶ ನೀಡಬೇಕು’’ ಎಂದು ವೇಣುಗೋಪಾಲ್ ಹೇಳಿದರು. ‘‘ಕಾನೂನು ತಿದ್ದುಪಡಿ ವರಗೆ ನಾವು ಕಾಯಲಾರೆವು. ಇದು ಗಂಭೀರ ಪರಿಸ್ಥಿತಿ. ಇದನ್ನು ನಿಲ್ಲಿಸಬೇಕು’’ ಎಂದು ಪೀಠ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News