ಫೇಸ್‌ಬುಕ್‌ನಲ್ಲಿ ರಾಷ್ಟ್ರಪತಿಯ ನಕಲಿ ಪತ್ರ ಪೋಸ್ಟ್: 1 ವರ್ಷದ ಬಳಿಕ ಆರೋಪಿ ಬಂಧನ

Update: 2018-08-10 16:37 GMT

ಹೊಸದಿಲ್ಲಿ, ಆ. 10: ತನ್ನ ಫೇಸ್‌ಬುಕ್‌ನಲ್ಲಿ ರಾಷ್ಟ್ರಪತಿ ಅವರ ನಕಲಿ ಪತ್ರ ಪೋಸ್ಟ್ ಮಾಡಿದ್ದ ಆರೋಪದಲ್ಲಿ ಬೆಂಗಳೂರಿನ ಮ್ಯಾನೇಜ್‌ಮೆಂಟ್ ಕಾಲೇಜಿನ ನಿರ್ದೇಶ ಕರನ್ನು ಪ್ರಕರಣ ದಾಖಲಾದ ಒಂದು ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.

 ಆರೋಪಿ 50ರ ಹರೆಯದ ಹರಿಕೃಷ್ಣ ಮಾರಮ್ ಅಮೆರಿಕದಲ್ಲಿ ಇದ್ದರು. ಕಳೆದ ತಿಂಗಳು ಅವರು ಬೆಂಗಳೂರಿಗೆ ಆಗಮಿಸಿದ್ದರು. ಸೈಬರ್ ಕ್ರೈಮ್ ಸೆಲ್‌ನ ಪೊಲೀಸರು ಬುಧವಾರ ಅವರನ್ನು ಬಂಧಿಸಿದ್ದಾರೆ. ಕಳೆದ ವರ್ಷ ರಾಷ್ಟ್ರಪತಿ ಅವರ ಮಾಧ್ಯಮ ಕಾರ್ಯದರ್ಶಿ ದೂರು ದಾಖಲಿಸಿದ ಬಳಿಕ ಸೈಬರ್ ಸೆಲ್‌ನ ಸಬ್ ಇನ್ಸ್‌ಪೆಕ್ಟರ್ ಭಾನು ಪ್ರತಾಪ್ ಪ್ರಕರಣದ ತನಿಖೆ ಆರಂಭಿಸಿದ್ದರು. ಡಿಜಿಟಲ್ ಮಾರ್ಕೆಟಿಂಗ್ ಕುರಿತು ಬರೆದ ಪುಸ್ತಕಕ್ಕೆ ರಾಷ್ಟ್ರಪತಿ ಅವರು ಪ್ರಸಂಶಾ ಪತ್ರ ನೀಡಿದ್ದಾರೆ ಎಂದು ನಕಲಿ ಪತ್ರವನ್ನು ಹರಿ ಕೃಷ್ಣ ಮಾರಮ್ ಫೇಸ್ ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗುವ ಸಂದರ್ಭ ಹರಿಕೃಷ್ಣನ್ ಮಾರಮ್ ಅಮೆರಿಕದಲ್ಲಿ ಇದ್ದರು. ಅವರನ್ನು ಸಂಪರ್ಕಿಸಲಾಗಿತ್ತು. ಆದರೆ, ಅವರು ತನಿಖೆಯಲ್ಲಿ ಭಾಗಿಯಾಗಿರಲಿಲ್ಲ.

ಅವರ ವಿರುದ್ಧ ನಗರದ ನ್ಯಾಯಾಲಯ ಜಾಮೀನು ರಹಿತ ಬಂಧನಾದೇಶ ಹೊರಡಿಸಿತ್ತು. ಪ್ರಕ್ರಿಯೆಗಳನ್ನು ಪ್ರಾರಂಭಿಸಿದ ಪೊಲೀಸರು ಹರಿ ಕೃಷ್ಣ ಅವರನ್ನು ಘೋಷಿತ ಅಪರಾಧಿ ಎಂದು ಪ್ರಕಟಿಸಿದ್ದರು ಎಂದು ಅವರು ತಿಳಿಸಿದ್ದಾರೆ.

  ಅವರನ್ನು ಗುರುವಾರ ನಗರದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಕಲಿ ಪತ್ರ ರೂಪಿಸಲು ಬಳಸಲಾದ ಲ್ಯಾಪ್‌ಟಾಪ್ ಅನ್ನು ಪೊಲೀಸರು ವಶಪಡಿಸಿಕೊಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದೆ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News