ಯಮನ್: ಬಸ್ ಮೇಲೆ ಮಿತ್ರಪಡೆ ದಾಳಿ; 29 ಮಕ್ಕಳು ಸೇರಿ 50 ಸಾವು

Update: 2018-08-10 16:52 GMT

ಸನಾ (ಯಮನ್), ಆ. 10: ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆಯು ಉತ್ತರ ಯಮನ್‌ನಲ್ಲಿ ಬಂಡುಕೋರರ ವಿರುದ್ಧ ಗುರುವಾರ ನಡೆಸಿದ ವಾಯು ದಾಳಿಯ ವೇಳೆ, ಬಾಂಬೊಂದು ಜನನಿಬಿಡ ರಸ್ತೆಯೊಂದರಲ್ಲಿ ಸಂಚರಿಸುತ್ತಿದ್ದ ಬಸ್ಸೊಂದರ ಮೇಲೆ ಬಿದ್ದು ಮಕ್ಕಳು ಸೇರಿದಂತೆ ಕನಿಷ್ಠ 50 ಮಂದಿ ಮೃತಪಟ್ಟಿದ್ದಾರೆ ಹಾಗೂ 77 ಮಂದಿ ಗಾಯಗೊಂಡಿದ್ದಾರೆ ಎಂದು ಯಮನ್‌ನ ಬಂಡುಕೋರ ಒಡೆತನದ ಅಲ್ ಮಸೀರಾ ಟಿವಿ ಚಾನೆಲ್ ವರದಿ ಮಾಡಿದೆ.

 ಅದೇ ವೇಳೆ, ದಕ್ಷಿಣ ಸೌದಿ ಅರೇಬಿಯದತ್ತ ಕ್ಷಿಪಣಿಗಳನ್ನು ಹಾರಿಸಿದ ಹೌದಿ ಬಂಡುಕೋರರನ್ನು ಗುರಿಯಾಗಿಸಿ ತಾನು ನಡೆಸಿದ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಸೌದಿ ಅರೇಬಿಯ ನೇತೃತ್ವದ ಮಿತ್ರಕೂಟ ಹೇಳಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು ಹಾಗೂ ರಕ್ತದಿಂದ ತೊಯ್ದ ಅವರ ಬಟ್ಟೆಗಳು ಮತ್ತು ಶಾಲಾ ಚೀಲಗಳ ಚಿತ್ರಗಳನ್ನು ಅಲ್ ಮಸೀರಾ ಟಿವಿ ಪ್ರಸಾರ ಮಾಡುತ್ತಿದೆ.

15 ವರ್ಷಕ್ಕಿಂತ ಕೆಳಗಿನ 29 ಮಕ್ಕಳ ದೇಹಗಳನ್ನು ಸಾಡದಲ್ಲಿರುವ ರೆಡ್‌ಕ್ರಾಸ್ ಬೆಂಬಲಿತ ಆಸ್ಪತ್ರೆಯೊಂದು ಸ್ವೀಕರಿಸಿದೆ ಎಂದು ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿ (ಐಸಿಆರ್‌ಸಿ) ಟ್ವಿಟರ್‌ನಲ್ಲಿ ಹೇಳಿದೆ.

ಇದೇ ಆಸ್ಪತ್ರೆಯಲ್ಲಿ 30 ಮಕ್ಕಳು ಸೇರಿದಂತೆ ಗಾಯಗೊಂಡ 48 ವ್ಯಕ್ತಿಗಳು ದಾಖಲಾಗಿದ್ದಾರೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News