ನಿಮ್ಮ ಡೆಬಿಟ್ ಕಾರ್ಡ್‌ನ ಸುರಕ್ಷತೆ ಕಾಯ್ದುಕೊಳ್ಳುವುದು ಹೇಗೆ....?

Update: 2018-08-11 11:05 GMT

ಪ್ರತಿಯೊಂದೂ ನಮ್ಮ ಬೆರಳ ತುದಿಗಳಲ್ಲೇ ಇರುವ ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನದ ಶಕ್ತಿಯನ್ನು ಕೀಳಂದಾಜು ಮಾಡುವವರೇ ಹೆಚ್ಚು. ತಂತ್ರಜ್ಞಾನವು ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಿದೆಯಾದರೂ ಅದರ ಬಗ್ಗೆ ಹೆಚ್ಚಾಗಿ ತಿಳಿದಿರದ ವ್ಯಕ್ತಿಗಳು ಮೋಸ ಹೋಗಲೂ ಇದೇ ತಂತ್ರಜ್ಞಾನ ಬಳಕೆಯಾಗುತ್ತಿದೆ. ದೇಶವು ನಗದುರಹಿತ ಆರ್ಥಿಕತೆಯತ್ತ ಮುನ್ನಡೆಯುತ್ತಿದೆಯೇನೋ ನಿಜ,ಇದೇ ವೇಳೆ ತಂತ್ರಜ್ಞಾನ ಆಧರಿತ ವಂಚನೆಗಳೂ ಹೆಚ್ಚುತ್ತಿವೆ. ಈ ವರ್ಷವೊಂದರಲ್ಲಿಯೇ ಭಾರತೀಯ ಬ್ಯಾಂಕುಗಳಲ್ಲಿ ಇಂತಹ ಸುಮಾರು 6,000 ವಂಚನೆ ಪ್ರಕರಣಗಳು ದಾಖಲಾಗಿವೆ. ಡಿಜಿಟಲ್ ವಹಿವಾಟುಗಳ ಇಂದಿನ ದಿನಗಳಲ್ಲಿ ಹ್ಯಾಕರ್‌ಗ ಕೈಚಳಕದಿಂದಾಗಿ ಕೋಟ್ಯಾಧೀಶನೂ ಕ್ಷಣಾರ್ಧದಲ್ಲಿ ದಿವಾಳಿಯಾಗಬಹುದು.

ಇಂದು ಹೆಚ್ಚಿನವರು ಕನಿಷ್ಠ ಒಂದಾದರೂ ಡೆಬಿಟ್ ಕಾರ್ಡ್ ಹೊಂದಿರುತ್ತಾರೆ. ಆದರೆ ಅದರ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ತುಂಬ ಮುಖ್ಯವಾಗಿದೆ. ಇಲ್ಲದಿದ್ದರೆ ನಮಗೇ ಗೊತ್ತಿಲ್ಲದಂತೆ ನಮ್ಮ ಬ್ಯಾಂಕ್ ಖಾತೆಗಳಲ್ಲಿನ ಹಣ ಮಾಯವಾಗುತ್ತದೆ. ಡೆಬಿಟ್ ಕಾರ್ಡ್ ಸುರಕ್ಷತೆಗಾಗಿ ಅನುಸರಿಸಬಹುದಾದ ಕೆಲವು ಮಾರ್ಗಗಳಿಲ್ಲಿವೆ....

►ಸ್ಕಿಮರ್‌ಗಳ ಬಗ್ಗೆ ಎಚ್ಚರಿಕೆಯಿರಲಿ

ಎಟಿಎಂಗಳು ಮತ್ತು ಪಿಒಎಸ್ ಯಂತ್ರಗಳಲ್ಲಿ ಸ್ಕಿಮರ್‌ಗಳನ್ನು ಬಳಸಿ ಡೆಬಿಟ್ ಕಾರ್ಡ್‌ಗಳ ಮಾಹಿತಿಗಳಿಗೆ ಕನ್ನ ಹಾಕುವುದು ವಂಚಕರ ಹಳೆಯ ಮತ್ತು ನೆಚ್ಚಿನ ತಂತ್ರವಾಗಿದೆ. ಈ ತೆಳುವಾದ ಸಾಧನಗಳನ್ನು ನಾವು ಕಾರ್ಡ್‌ಗಳನ್ನು ತೂರಿಸುವವಲ್ಲಿ/ಉಜ್ಜುವಲ್ಲಿ ಅಳವಡಿಸಲಾಗಿರುತ್ತದೆ ಮತ್ತು ಅವುಗಳ ಮೂಲಕ ಕಾರ್ಡ್‌ಗಳ ಮಾಹಿತಿ ಸುಲಭವಾಗಿ ವಂಚಕರ ಪಾಲಾಗುತ್ತದೆ. ಈಗ ಹೊಸದಾಗಿ ಬಂದಿರುವ ಚಿಪ್ ಆಧರಿತ ಡೆಬಿಟ್ ಕಾರ್ಡ್‌ಗಳಲ್ಲಿ ಈ ವಂಚನೆಗೆ ಅವಕಾಶವಿಲ್ಲ. ಹೀಗಾಗಿ ನಿಮ್ಮ ಬಳಿ ಇತ್ತೀಚಿನ ಚಿಪ್ ಆಧರಿತ ಕಾರ್ಡ್ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಡೆಬಿಟ್ ಕಾರ್ಡ್ ಬಳಸುವ ಮುನ್ನ ಯಂತ್ರಗಳಲ್ಲಿ ಸ್ಕಿಮರ್ ಅಳವಡಿಕೆಯಾಗಿದೆಯೇ ಎನ್ನುವುದನ್ನು ಸೂಕ್ಷ್ಮವಾಗಿ ಪರಿಶೀಲಿಸಿ.

►ಎರಡು ಹಂತಗಳ ದೃಢೀಕರಣ

 ಭಾರತದಲ್ಲಿ ವಹಿವಾಟುಗಳು ನಿಮ್ಮ ಬಳಿ ಇರುವ ಸಾಧನ(ಡೆಬಿಟ್/ಕ್ರೆಡಿಟ್ ಕಾರ್ಡ್,ಬ್ಯಾಂಕ್ ಖಾತೆ,ಮೊಬೈಲ್ ಇತ್ಯಾದಿ) ಮತ್ತು ನಿಮಗೆ ತಿಳಿದಿರುವ ಮಾಹಿತಿ(ಸಿವಿವಿ,ಪಿನ್,ಒಟಿಪಿ ಇತ್ಯಾದಿ) ಈ ಎರಡು ದೃಢೀಕರಣ ಅಂಶಗಳನ್ನು ಆಧರಿಸಿ ನಡೆಯುತ್ತವೆ. ಈ ಎರಡು ಹಂತಗಳ ದೃಢೀಕರಣವು ಉತ್ತಮ ಸುರಕ್ಷತೆಯನ್ನು ಒದಗಿಸುತ್ತದೆ. ಇದೇ ಕಾರಣದಿಂದ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ಕಾರ್ಡ್ ನೀಡಿರುವ ಬ್ಯಾಂಕ್/ಸಂಸ್ಥೆಯಲ್ಲಿ ಅಪ್‌ಡೇಟ್ ಮಾಡುವುದು ಮುಖ್ಯವಾಗುತ್ತದೆ. ಇದರಿಂದ ಒಟಿಪಿಯಂತಹ ಸೂಕ್ಷ್ಮ ಮಾಹಿತಿಗಳನ್ನು ಸಂಬಂಧಿತ ಗ್ರಾಹಕ ಮಾತ್ರ ಸ್ವೀಕರಿಸುವಂತಾಗುತ್ತದೆ.

►ಶಂಕಾಸ್ಪದ ಚಟುವಟಕೆಗಳಿದ್ದರೆ ವರದಿ ಮಾಡಿ

ನಿಮ್ಮ ಕಾರ್ಡ್‌ನ ವಿವರಗಳು ವಂಚಕರ ಕೈಗೆ ಸಿಕ್ಕಿದರೆ ಕ್ಷಣಾರ್ಧದಲ್ಲಿ ಅವರು ತಮ್ಮ ಕೈಚಳಕವನ್ನು ತೋರಿಸುತ್ತಾರೆ. ನಿಮ್ಮ ಕಾರ್ಡ್ ಕಳೆದುಹೋದರೆ ಅಥವಾ ಕಳ್ಳತನವಾದರೆ ತಕ್ಷಣ ಅದನ್ನು ನಿಮ್ಮ ಬ್ಯಾಂಕಿಗೆ ತಿಳಿಸಿ ಕಾರ್ಡ್‌ನ್ನು ಬ್ಲಾಕ್ ಮಾಡಿಸಿ. ಹೊಸ ಕಾರ್ಡ್ ಸಿಗುವವರೆಗೆ ಸುಮಾರು ಒಂದು ವಾರ ಅನಾನುಕೂಲವಾಗಬಹುದು,ಆದರೆ ನಿಮ್ಮ ಹಣವನ್ನು ಸುರಕ್ಷಿತವಾಗಿಡುವ ಪ್ರಯತ್ನವಾಗಿ ನೀವು ಈ ಕೆಲಸವನ್ನು ಮಾಡಲೇಬೇಕಾಗುತ್ತದೆ. ನಿಮ್ಮ ಕಾರ್ಡ್‌ನಲ್ಲಿ ನಿಮಗೆ ಗೊತ್ತಿಲ್ಲದ ಅಥವಾ ನೀವು ಅನುಮತಿಸಿರದ ಯಾವುದೇ ವ್ಯವಹಾರ ನಡೆದಿರುವುದು ಗಮನಕ್ಕೆ ಬಂದರೆ ತಕ್ಷಣ ಕ್ರಮವನ್ನು ತೆಗೆದುಕೊಳ್ಳಿ. ಇದೇ ಕಾರಣದಿಂದ ನಿಮ್ಮ ಬ್ಯಾಂಕು ನಿಮಗೆ ಕಳುಹಿಸುವ ಎಸ್‌ಎಂಎಸ್‌ಗಳನ್ನು ತಪ್ಪದೇ ಓದುವುದು ಮುಖ್ಯವಾಗುತ್ತದೆ.

►ಸಾಮಾಜಿಕ ಮಾಧ್ಯಮಗಳಲ್ಲಿ ಅತಿಯಾದ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ

ನಿಮ್ಮ ಜನ್ಮದಿನದಂದು ಶುಭಾಶಯಗಳನ್ನು ಪಡೆಯಲು ನೀವು ನಿಮ್ಮ ಜನ್ಮದಿನಾಂಕವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಬಹುದು. ಆದರೆ ವಿಶೇಷವಾಗಿ ಗುರುತು ಕಳ್ಳತನಕ್ಕೆ ಸಂಬಂಧಿಸಿದಂತೆ ವಂಚಕರಿಗೆ ಇದು ತುಂಬ ಉಪಯೋಗಿಯಾಗುತ್ತದೆ. ವಂಚಕ ನಿಮ್ಮ ಕಾರ್ಡ್‌ನ್ನು ಎಗರಿಸಿದ್ದಾನೆ ಎಂದಿಟ್ಟುಕೊಳ್ಳಿ,ಆತ ಸಾಮಾಜಿಕ ಮಾಧ್ಯಮಗಳಿಂದ ನಿಮ್ಮ ಜನ್ಮದಿನಾಂಕ, ಮದುವೆಗೆ ಮೊದಲಿನ ನಿಮ್ಮ ತಾಯಿಯ ಹೆಸರು ಇತ್ಯಾದಿಗಳನ್ನು ಪಡೆದುಕೊಳ್ಳಬಹುದು. ನಿಮ್ಮ ಬ್ಯಾಂಕಿಗ ಕರೆ ಮಾಡಿ ನಿಮ್ಮ ಗುರುತು ಹೇಳಿಕೊಂಡು ಜನ್ಮ ದಿನಾಂಕ,ತಾಯಿಯ ಮೊದಲಿನ ಹೆಸರುಗಳಂತಹ ದೃಢೀಕರಣ ಪ್ರಶ್ನೆಗಳಿಗೆ ಉತ್ತರಿಸುವುದು ಆತನಿಗೆ ಸುಲಭವಾಗುತ್ತದೆ. ಹೀಗಾಗಿ ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ನಿಮ್ಮ ಹೆಚ್ಚಿನ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ.

►ಸೂಕ್ಷ್ಮ ಮಾಹಿತಿಗಳನ್ನು ಯಾರಿಗೂ ಬಹಿರಂಗಗೊಳಿಸಬೇಡಿ

ನಿಮ್ಮ ಕಾರ್ಡ್ ಕುರಿತು ಗೌಪ್ಯ ಮಾಹಿತಿಗಳನ್ನು ಅಥವಾ ನಿಮ್ಮ ವಹಿವಾಟುಗಳ ವಿವರಗಳನ್ನು ವ್ಯಕ್ತಿಗತವಾಗಿ ಅಥವಾ ಫೋನ್ ಮೂಲಕ ಯಾರೊಂದಿಗೂ ಎಂದಿಗೂ ಹಂಚಿಕೊಳ್ಳಬೇಡಿ. ಫಿಷಿಂಗ್ ಬಗ್ಗೆ ಎಚ್ಚರಿಕೆಯಿರಲಿ. ವಂಚಕರು ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ನಿಮಗೆ ಕರೆ ಮಾಡಿ ಕಾರ್ಡ್‌ಗೆ ಸಂಬಂಧಿಸಿದಂತೆ ಪಿನ್,ಕಾರ್ಡ್ ನಂಬರ್ ಇತ್ಯಾದಿ ಮಾಹಿತಿಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ. ಯಾವುದೇ ಕಾರಣಕ್ಕೂ ಇಂತಹವರಿಗೆ ಯಾವುದೇ ಮಾಹಿತಿಗಳನ್ನು ನೀಡಬೇಡಿ. ಬ್ಯಾಂಕುಗಳು ಯಾವುದೇ ಸಮಯದಲ್ಲಿಯೂ ನಿಮ್ಮ ಕಾರ್ಡ್ ಅಥವಾ ನಿಮ್ಮ ಬ್ಯಾಂಕ್ ಖಾತೆಯ ಬಗ್ಗೆ ಫೋನ್‌ನಲ್ಲಿ ಅಥವಾ ಮೇಲ್ ಮೂಲಕ ಮಾಹಿತಿಗಳನ್ನು ಕೇಳುವುದಿಲ್ಲ ಎನ್ನುವುದು ನಿಮಗೆ ನೆನಪಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News