ನೀರವ್ ಮೋದಿ ಸಹೋದರಿ, ಸಹೋದರರ ವಿರುದ್ಧ ಸಾರ್ವಜನಿಕ ಸಮನ್ಸ್ ಜಾರಿ

Update: 2018-08-11 13:03 GMT

ಹೊಸದಿಲ್ಲಿ, ಆ.11: 11,400 ಕೋಟಿ ರೂ. ಮೊತ್ತವನ್ನು ಬ್ಯಾಂಕ್‌ಗಳಿಗೆ ವಂಚಿಸಿರುವ ಆರೋಪಿ ವಜ್ರಾಭರಣ ವ್ಯಾಪಾರಿ ನೀರವ್ ಮೋದಿಯ ಸಹೋದರ ಹಾಗೂ ಸಹೋದರಿಗೆ ಪರಾರಿಯಾದ ಆರ್ಥಿಕ ಅಪರಾಧಿಗಳ ಕಾನೂನು ವಿಶೇಷ ನ್ಯಾಯಾಲಯ ಶನಿವಾರದಂದು ಸಮನ್ಸ್ ಜಾರಿ ಮಾಡಿದ್ದು, ಸೆಪ್ಟೆಂಬರ್ 25ರ ಒಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.

ಅವರು ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದರೆ ಹೊಸದಾಗಿ ಜಾರಿಗೆ ಬಂದಿರುವ ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆಯಡಿಯಲ್ಲಿ ಅವರ ಆಸ್ತಿಯನ್ನು ಜಪ್ತಿ ಮಾಡಬಹುದಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಮುಂಬೈಯಲ್ಲಿ ಹಣ ವಂಚನೆ ತಡೆ ಕಾಯ್ದೆ ಪ್ರಕರಣಗಳ ನ್ಯಾಯಾಧೀಶರೂ ಆಗಿರುವ ಎಂ.ಎಸ್ ಆಝ್ಮಿ ಪ್ರಮುಖ ಮೂರು ದಿನಪತ್ರಿಕೆಗಳ ಮೂಲಕ ನೀರವ್ ಮೋದಿಯ ಸಹೋದರಿ ಪೂರ್ವಿ ಮೋದಿ ಹಾಗೂ ಸಹೋದರ ನೀಶಲ್ ಮೋದಿಗೆ ಸಾರ್ವಜನಿಕ ಸಮನ್ಸ್ ಜಾರಿ ಮಾಡಿದ್ದಾರೆ.

ಪೂರ್ವಿ ಮತ್ತು ನೀಶಲ್ ಮೋದಿ ಹಣ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಮತ್ತು ಪ್ರಕರಣ ಬಯಲಿಗೆ ಬರುತ್ತಿದ್ದಂತೆ ದೇಶದಿಂದ ಪರಾರಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News