ನಾವು ಬಾಂಗ್ಲಾ ವಿರೋಧಿಯಲ್ಲ: ಕೋಲ್ಕತ್ತಾ ರ‍್ಯಾಲಿಯಲ್ಲಿ ಅಮಿತ್ ಶಾ

Update: 2018-08-11 13:45 GMT

ಕೊಲ್ಕತ್ತಾ, ಆ.11: “ಬಿಜೆಪಿಯ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿಯವರೇ ಬಂಗಾಳಿಯಾಗಿರುವಾಗ ಬಿಜೆಪಿ ಹೇಗೆ ಬಂಗಾಲ ವಿರೋಧಿಯಾಗಬಹುದು?, ನಾವು ಬಾಂಗ್ಲಾ ವಿರೋಧಿಯಲ್ಲ, ಮಮತಾ ವಿರೋಧಿ'' ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕೊಲ್ಕತ್ತಾದಲ್ಲಿ ಶನಿವಾರ ತಮ್ಮ ಪ್ರಥಮ  ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, “ಬಂಗಾಳದ ಜನರು ಈ ರ್ಯಾಲಿ ನೋಡಬಾರದೆಂದು ಹಲವಾರು ಚಾನೆಲುಗಳ ಸಿಗ್ನಲುಗಳಲ್ಲಿ ತೊಂದರೆ ಸೃಷ್ಟಿಸಲಾಗಿದೆ. ಆದರೆ ಇದು ಟಿಎಂಸಿ ಆಡಳಿತವನ್ನು ರಾಜ್ಯದಿಂದ ಬುಡಮೇಲುಗೊಳಿಸುವುದರಿಂದ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ದನಿಯ ಸದ್ದಡಗಿಸಲು ಪ್ರಯತ್ನಿಸಿದವರೆಲ್ಲರೂ ಸೋತಿದ್ದಾರೆ'' ಎಂದರು.

“ಮಮತಾ ಬ್ಯಾನರ್ಜಿ ಎನ್‍ಆರ್‍ಸಿಯನ್ನು ವಿರೋಧಿಸಿದ್ದಾರೆ. ನೀವೆಷ್ಟು ವಿರೋಧಿಸಿದರೂ ಎನ್‍ಆರ್‍ಸಿ ನಿಲ್ಲದು. ಆ ಪ್ರಕ್ರಿಯೆಯನ್ನು  ಮುಗಿಸುವ ಬದ್ಧತೆ ನಮಗಿದೆ” ಎಂದು ಶಾ ಹೇಳಿದರು.

“ಬಾಂಗ್ಲಾದೇಶಿ ಅಕ್ರಮ ವಲಸಿಗರು ದೇಶದ ಭದ್ರತೆಗೆ ಅಪಾಯಕಾರಿ. ದೇಶದ ಸುರಕ್ಷತೆ ಅಥವಾ ಅವರ ಮತ ಬ್ಯಾಂಕ್ ಮುಖ್ಯವೇ ಎಂಬುದನ್ನು ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟ ಪಡಿಸಬೇಕು”' ಎಂದು ಶಾ ಆಗ್ರಹಿಸಿದರು.

“ಪಶ್ಚಿಮ ಬಂಗಾಳದಲ್ಲಿರುವ ನಿರಾಶ್ರಿತರನ್ನು ಹಿಂದಕ್ಕೆ ಕಳುಹಿಸುವ ಕಾರ್ಯಕ್ರಮವಿಲ್ಲ, ಟಿಎಂಸಿ ಬೆಂಬಲಿಗರು ಅನಗತ್ಯ ವದಂತಿಗಳನ್ನು ಹರಡುತ್ತಿದ್ದಾರೆ” ಎಂದು ಶಾ ಹೇಳಿದರಲ್ಲದೆ, ಬಂಗಾಳದ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಮಾತ್ರ ಸಾಧ್ಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News