ಆಶ್ರಮಗಳಿಂದ ಮಕ್ಕಳ ನಾಪತ್ತೆ ಪ್ರಕರಣ: 30,000 ಮಕ್ಕಳ ಆಧಾರ್ ಸಂಖ್ಯೆ ಸರಕಾರಿ ಜಾಲತಾಣದ ಜೊತೆ ಜೋಡಣೆ

Update: 2018-08-11 13:06 GMT

ಹೊಸದಿಲ್ಲಿ, ಆ.11: ಆಶ್ರಮಗಳಿಂದ ಮಕ್ಕಳು ನಾಪತ್ತೆಯಾಗಿರುವ ಪ್ರಕರಣವು ದೇಶಾದ್ಯಂತ ಆಕ್ರೋಶದ ಅಲೆಯನ್ನು ಎಬ್ಬಿಸಿರುವ ಹಿನ್ನೆಲೆಯಲ್ಲಿ ಸಾಂಸ್ಥಿಕ ಸುರಕ್ಷತೆಯಲ್ಲಿರುವ 30,000ಕ್ಕೂ ಅಧಿಕ ಮಕ್ಕಳ ಆಧಾರ್ ಸಂಖ್ಯೆಯನ್ನು ಟ್ರಾಕ್ ಚೈಲ್ಡ್ ಜಾಲತಾಣದ ಜೊತೆ ಜೋಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಾಕ್ ಚೈಲ್ಡ್ ದೇಶದ ವಿವಿಧ ಭಾಗಗಳಲ್ಲಿ ನಾಪತ್ತೆಯಾಗಿರುವ ಮಕ್ಕಳ ಮಾಹಿತಿಯನ್ನು ಒದಗಿಸುವ ಸರಕಾರಿ ದತ್ತಾಂಶಮೂಲದಂತೆ ಕಾರ್ಯಾಚರಿಸುತ್ತದೆ. ಈ ಜಾಲತಾಣವು ಮಕ್ಕಳ ಆಶ್ರಮ, ಪೊಲೀಸ್ ಇಲಾಕೆ ಮತ್ತು ರಾಜ್ಯ ಸರಕಾರಗಳ ಮಧ್ಯೆ ಸಮನ್ವಯತೆಯನ್ನು ಸಾಧಿಸಲು ನೆರವಾಗುತ್ತದೆ. ದೇಶದಲ್ಲಿರುವ 9000 ಮಕ್ಕಳ ಕಲ್ಯಾಣ ಸಂಸ್ಥೆಗಳಲ್ಲಿ ಒಟ್ಟಾರೆ 2,61,566 ಮಕ್ಕಳು ವಾಸಿಸುತ್ತಿದ್ದಾರೆ. ಈ ಪೈಕಿ ಸರಕಾರ ಈಗಾಗಲೇ 30,835 ಮಕ್ಕಳ ಆಧಾರ್ ಕಾರ್ಡನ್ನು ಟ್ರಾಕ್ ಚೈಲ್ಡ್ ಜಾಲತಾಣದ ಜೊತೆ ಜೋಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶದ ದಿಯೋರಿಯದಲ್ಲಿರುವ ಮಕ್ಕಳ ಆಶ್ರಮದಿಂದ ಹದಿನೆಂಟು ಹೆಣ್ಮಕ್ಕಳು ನಾಪತ್ತೆಯಾಗಿದ್ದು ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.

ರಾಷ್ಟ್ರೀಯ ಅಪರಾಧ ದಾಖಲಾತಿ ಮಂಡಳಿಯ ವರದಿಯ ಪ್ರಕಾರ, 2014, 2015 ಮತ್ತು 2016ರಲ್ಲಿ ಕ್ರಮವಾಗಿ 68,874, 60,443 ಮತ್ತು 63,407 ಮಕ್ಕಳು ನಾಪತ್ತೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News