ಅಮಿತ್ ಶಾಗೆ ಕಪ್ಪು ಬಾವುಟದ ಸ್ವಾಗತ

Update: 2018-08-11 13:34 GMT

ಕೋಲ್ಕತ್ತಾ, ಆ. 11: ನಗರದ ಕೇಂದ್ರ ಭಾಗದಲ್ಲಿ ನಡೆಯುವ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಕೋಲ್ಕತ್ತಾದ ಎನ್‌ಎಸ್‌ಸಿ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಆಗಮಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಯುವ ಕಾಂಗ್ರೆಸ್‌ನ ಕಾರ್ಯಕರ್ತರು ಕಪ್ಪು ಪತಾಕೆ ಪ್ರದರ್ಶಿಸಿದರು.

ಅಮಿತ್ ಶಾ ಅವರು ವಿಮಾನ ನಿಲ್ದಾಣದಿಂದ ಹೊರಗಿಳಿಯುತ್ತಿ ರುವಾಗ ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟಗಳನ್ನು ಪ್ರದರ್ಶಿಸಿದರು ಹಾಗೂ ಮೋದಿ, ಶಾ ವಿರುದ್ಧ ಘೋಷಣೆಗಳನ್ನು ಕೂಗಿದರು. ನಗರದಲ್ಲಿ ಅಮಿತ್ ಶಾ ಅವರ ಬೆಂಗಾವಲು ಮೋಟಾರು ಸೈಕಲ್ ಹಾಗೂ ಇತರ ವಾಹನಗಳ ಸಂಚಾರಕ್ಕೆ ಕಾರ್ಯಕರ್ತರು ತಡೆ ಒಡ್ಡಿದರು. ಕೂಡಲೇ ಪೊಲೀಸರು ಕಾರ್ಯ ಪ್ರವೃತ್ತರಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಅದಕ್ಕಿಂತ ಮೊದಲು ಅಮಿತ್ ಶಾ ಅವರನ್ನು ಪಕ್ಷದ ರಾಜ್ಯ ಉಸ್ತುವಾರಿ ಕೈಲಾಸ್ ವಿಜಯ್‌ ವರ್ಗೀಯ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಸ್ವಾಗತಿಸಿದರು. ಪಕ್ಷದ ಕೆಲವು ಬೆಂಬಲಿಗರು ನೃತ್ಯ, ಸಂಗೀತದ ಮೂಲಕ ಅವರನ್ನು ಬರಮಾಡಿಕೊಂಡರು ಹಾಗೂ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಪೌರತ್ವ ರಿಜಿಸ್ಟರ್ ರೂಪಿಸುವಂತೆ ಆಗ್ರಹಿಸಿದರು. ಈ ನಡುವೆ, ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ರಿಜಿಸ್ಟರ್ ಕರಡು ವಿರೋಧಿಸಿ ತೃಣಮೂಲ ಕಾಂಗ್ರೆಸ್ ಪಶ್ಚಿಮಬಂಗಾಳ ದಾದ್ಯಂತ ಬಂದ್ ನಡೆಸಿತು. ಅಮಿತ್ ಶಾ ಅವರ ರ್ಯಾಲಿ ಧ್ವಂಸಗೊಳಿಸಲು ಟಿಎಂಸಿ ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸಿದೆ ಎಂದು ಬಿಜೆಪಿ ಹೇಳಿದೆ. ಕೋಲ್ಕತ್ತಾದ ಕೇಂದ್ರ ಭಾಗವಾದ ಮೇಯೋ ರಸ್ತೆಯಲ್ಲಿ ರ್ಯಾಲಿ ನಡೆಸಲು ಅಮಿತ್ ಶಾ ಇಲ್ಲಿಗೆ ಆಗಮಿಸಿದ್ದರು.

ಅಮಿತ್ ಶಾ ಅವರು ಕೋಲ್ಕತ್ತಾಕ್ಕೆ ಬರುವುದಕ್ಕಿಂತ ಒಂದು ದಿನ ಮುಂಚೆ, ‘ಬಿಜೆಪಿ ಬಂಗಾಳ ಬಿಟ್ಟು ತೊಲಗು’, ‘ಬಂಗಾಳ ವಿರೋಧಿ ಬಿಜೆಪಿ ಹಿಂದೆ ಹೋಗು’ ಎಂಬ ಘೋಷ ವಾಕ್ಯಗಳುಳ್ಳ ಪೋಸ್ಟರ್‌ಗಳನ್ನು ನಗರದಾದ್ಯಂತ ಹಾಗೂ ಅಮಿತ್ ಶಾ ಸಾಗುವ ರಸ್ತೆಯ ಬದಿಯಲ್ಲಿ ಅಂಟಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News