ಮೇಕ್ ಇನ್ ಇಂಡಿಯಾದಲ್ಲಿ ತಯಾರಾದ ಸನಾತನ ಬಾಂಬ್!

Update: 2018-08-11 18:32 GMT

‘ಉಗ್ರರ ಬಂಧನ ಉಗ್ರರ ಬಂಧನ’ ಎಂಬ ಸುದ್ದಿ ಕೇಳಿದ್ದೇ ವರ್ತಿಚಕ್ರ ಬೇಳೆೆಸೂಳಿಯವರು ಬೀದಿಗಿಳಿದು ‘‘ದೇಶದ್ರೋಹಿಗಳಿಗೆ ಧಿಕ್ಕಾರ...’’ ‘‘ಭಾರತ ಮಾತೆಗೆ ಜಯವಾಗಲಿ’’ ‘‘ಪಾಕಿಸ್ತಾನಕ್ಕೆ ಧಿಕ್ಕಾರ’’ ಎಂದು ಪ್ರತಿಭಟಿಸುತ್ತಾ ‘‘ಉಗ್ರರು ಹೇಗೆ ಪಾಕಿಸ್ತಾನ, ಬಂಗಾಳ, ಅಸ್ಸಾಂ, ಕಾಶ್ಮೀರದಲ್ಲಿ ಭಾರತದ ವಿರುದ್ಧ ಸಂಚು ರೂಪಿಸುತ್ತಿದ್ದಾರೆ’’ ಎನ್ನುವ ಹರಿಕತೆಯನ್ನು ರಾಗಬದ್ಧವಾಗಿ ಹೇಳತೊಡಗಿದರು.
ಬೇಳೆೆಸೂಳಿಯವರು ತಮ್ಮ ಹರಿಕತೆ ಶುರು ಮಾಡಿದಂತೆಯೇ, ಕೊಳೆತ ಮಾಂಸದ ಮೇಲೆ ನೊಣ ಮುತ್ತಿಕೊಂಡಂತೆ ಪತ್ರಕರ್ತರು ಮುತ್ತಿಕೊಂಡರು. ಈಗ ಅವರೆಲ್ಲರು ಉಗ್ರರು ಯಾವ ಯಾವ ರಾಜ್ಯಗಳ ಮದರಸಗಳಲ್ಲಿ ಓದಿದ್ದಾರೆ, ಯಾವ ಯಾವ ಟಿವಿ ಭಾಷಣಗಳನ್ನು ಆಲಿಸಿದ್ದಾರೆ ಎನ್ನುವುದನ್ನೆಲ್ಲ ಬರೆ ಬರೆದು, ಮತ್ತೆ ಮತ್ತೆ ಖಾಲಿ ಹಾಳೆಗಳನ್ನು ಕೇಳತೊಡಗಿದರು. ಹೀಗೆ ಪತ್ರಕರ್ತರೆಲ್ಲರೂ, ಉಗ್ರರು ದೇಶದ ಯಾವ ಯಾವ ದೇವಸ್ಥಾನಗಳ ಮೇಲೆ ಎರಗಲು ಸಿದ್ಧರಾಗಿದ್ದರು, ಸ್ವಾತಂತ್ರ ದಿನ ಎಲ್ಲೆಲ್ಲ ಸ್ಫೋಟಗಳನ್ನು ನಡೆಸಲು ಹೊಂಚು ಹಾಕಿದ್ದರು ಎಂಬಿತ್ಯಾದಿಗಳನ್ನು ಬರೆಯತೊಡಗಿದಂತೆಯೇ....
ಅಷ್ಟರಲ್ಲಿ ಅಲ್ಲಿಗೆ ಬಂದ ಪತ್ರಕರ್ತ ಎಂಜಲು ಕಾಸಿ ‘‘ಸಾರ್ ಬಂಧನವಾದುದು ಸನಾತನ ಸಂಸ್ಥೆಯ ಉಗ್ರರದ್ದು’’ ಎಂಬ ಬಾಂಬ್ ಹಾಕಿ ಬಿಟ್ಟ.
 ಬೇಳೆಸೂಳಿಯೂ ಸೇರಿದಂತೆ ನೆರೆದ ಪತ್ರಕರ್ತರು ಎಂಜಲು ಕಾಸಿಯನ್ನು, ಈಗಷ್ಟೇ ಅಲ್‌ಖಾಯಿದಾದಿಂದ ತರಬೇತಿ ಪಡೆದು ಬಂದ ಆತ್ಮಹತ್ಯಾ ಬಾಂಬರ್‌ನನ್ನು ನೋಡಿದಂತೆ ನೋಡಿದರು. ಕಾಸಿ ಇನ್ನೊಮ್ಮೆ ಸ್ಪಷ್ಟ ಪಡಿಸಿದ ‘‘ಸಾರ್, ಎಟಿಎಸ್ ಅಧಿಕಾರಿಗಳು ಬಂಧಿಸಿದ್ದು ಹಸಿರು ಉಗ್ರರನ್ನಲ್ಲವಂತೆ, ಕೇಸರಿ ಉಗ್ರರನ್ನಂತೆ....ಸನಾತನ ಸಂಸ್ಥೆಗೆ ಸೇರಿದವರಂತೆ....’’ ಮತ್ತೊಮ್ಮೆ ಸ್ಫೋಟಿಸಿದ.
ಬೇಳೆಸೂಳಿ ಅತ್ಯಂತ ವೇದನೆಯಿಂದ ಕರುಳು ಕಿವುಚಿದವನಂತೆ ಹೇಳಿದ ‘‘ನೋಡಿ, ಮಾಧ್ಯಮಗಳು ಅದು ಹೇಗೆ ಸುದ್ದಿಗಳನ್ನು ತಿರುಚುತ್ತಿವೆ...ಮುಚ್ಚಿ ಹಾಕುತ್ತಿವೆ....ಅಲ್ ಮುಜಾಹಿದೀನ್ ಉಗ್ರರನ್ನು ಹಿಂದೂಗಳ ತಲೆಗೆ ಕಟ್ಟುತ್ತಿವೆ....’’
ಅಷ್ಟರಲ್ಲಿ ಕಾಸಿ ಹೇಳಿದ ‘‘ಇಲ್ಲ ಸಾರ್...ನಿಜಕ್ಕೂ ಬಂಧನವಾಗಿರುವುದು ಸನಾತನ ಸಂಸ್ಥೆಯವರನ್ನೇ ಆಗಿದೆ...ಅವನ ುನೆಯಲ್ಲಿ ಬಾಂಬ್‌ಗಳು ಸಿಕ್ಕಿವೆ....’’
ಬೇಳೆ ಸೂಳಿ ಮತ್ತೆ ದೈನ್ಯದ ಮುಖಭಾವ ಮಾಡಿ ಹರಿಕತೆ ಮುಂದುವರಿಸಿದ ‘‘ನಿಮಗೆ ಗೊತ್ತೇನು...ಹಿಂದೂಗಳು ದೀಪಾವಳಿಗೆಂದು ಪಟಾಕಿಗಳನ್ನು ತಂದು ಮನೆಯಲ್ಲಿ ಇಟ್ಟುಕೊಂಡರೆ ಅವರನ್ನು ಬಂಧಿಸುತ್ತಾರೆ....ಪಟಾಕಿಗಳನ್ನೇ ಬಾಂಬುಗಳು ಎಂದು ಹೇಳಿ ಹಿಂದೂಗಳ ಶೋಷಣೆ ಮಾಡುತ್ತಾರೆ.... ಮಹಾರಾಷ್ಟ್ರದಲ್ಲಿ ಬಂಧನವಾಗಿರುವುದು ಹಿಂದೂಗಳೇ ಆಗಿದ್ದರೆ ಅವರಲ್ಲಿ ಇದ್ದಿರುವುದು ಬಾಂಬ್‌ಗಳಲ್ಲ, ಪಟಾಕಿಗಳಾಗಿವೆ....ನೋಡಿ....ಎಂತಹ ಆರೋಪ ಮಾಡುತ್ತಿದ್ದಾರೆ ನೋಡಿ....ಹಾಗಾದರೆ ಈ ದೇಶದಲ್ಲಿ ಹಿಂದೂಗಳು ದೀಪಾವಳಿ ಹಬ್ಬಕ್ಕೆ ಪಟಾಕಿ ಸುಡಬಾರದೇನು? ಪಾಕಿಸ್ತಾನಕ್ಕೆ ಹೋಗಿ ಹಿಂದುಗಳೂ ಹಬ್ಬ ಆಚರಿಸುವುದಕ್ಕೆ ಸಾಧ್ಯವೇನು?’’
ಕಾಸಿ ಈಗ ಮತ್ತೆ ಎದ್ದು ನಿಂತು ಹೇಳಿದ ‘‘ಸಾರ್...ಈಗ ದೀಪಾವಳಿ ಎಲ್ಲಿ ಬಂತು ಸಾರ್? ಅದಕ್ಕೆ ಇನ್ನೂ ದಿನಗಳಿವೆ....’’
ಬೇಳೆಸೂಲಿಯ ಹಣೆ ನೆರಿಗಟ್ಟಿತು ‘‘ನೋಡ್ರೀ...ದೀಪಾವಳಿಯಲ್ಲಿ ಮಾತ್ರವಲ್ಲ, ಸ್ವಾತಂತ್ರದಿನದಂದು ಕೂಡ ಹಿಂದೂಗಳು ಪಟಾಕಿ ಆಚರಿಸುವ ಸಂಪ್ರದಾಯವಿದೆ....ಹಿಂದೂಗಳಿಗೆ ಸ್ವಾತಂತ್ರ ದಿನವನ್ನು ಆಚರಿಸುವ ಹಕ್ಕೂ ಇಲ್ಲವಾದುವೇ?’’ ಕೇಳಿದ.
‘‘ಸಾರ್...ಬಾಂಬ್ ಸಿಡಿಸಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸುವುದೇ?....ಇದರಿಂದ ಸಾವು ನೋವುಗಳಾಗುವುದಿಲ್ಲವೇ?’’
‘‘ಹಿಂದೂಗಳು ಸ್ವಾತಂತ್ರ ಆಚರಣೆ ಮಾಡುವಾಗ, ದೀಪಾವಳಿಯಲ್ಲಿ ಪಟಾಕಿ ಸುಡುವಾಗ ಮಾತ್ರ ನಿಮಗೆ ಸಾವು ನೋವುಗಳ ಬಗ್ಗೆ ನೆನಪಾಗುವುದೆ? ನಮ್ಮ ದೇಶದಲ್ಲೇ ನಾವು ಪರಕೀಯರೇ? ದೇಶಕ್ಕಾಗಿ ಅದೆಷ್ಟು ಜನರು ಪ್ರಾಣ ಕೊಟ್ಟಿರುವಾಗ, ಸನಾತನ ಸಂಸ್ಥೆಯವರು ತಮ್ಮ ಪಟಾಕಿಗಳನ್ನು ಸಿಡಿಸಿದಾಗ ಆಗುವ ಸಾವು ನೋವುಗಳನ್ನು ಸಹಿಸಲು ಸಾಧ್ಯವಿಲ್ಲವೇ?’’ ಬೇಳೆ ಸೂಲಿ ನೋವಿನಿಂದ ಕೇಳಿದ.
‘‘ಆದರೆ ಅದು ಪಟಾಕಿ ಅಲ್ಲ ಸಾರ್...ಬಾಂಬ್....’’ ಕಾಸಿ ಹೇಳಿದ.
 ‘‘ಬಾಂಬ್ ಎಂದು ಯಾಕೆ ಹೇಳುತ್ತೀರಿ....ಅದು ಮೇಕ್ ಇನ್ ಇಂಡಿಯಾದ ಯೋಜನೆಯಲ್ಲಿ ತಯಾರಾದ ಬಾಂಬ್. ಹಿಂದೆ ನೋಡಿ....ವಿದೇಶದಿಂದ ಉಗ್ರರು ಅಲ್ಲಿ ತಯಾರಾದ ಬಾಂಬ್‌ಗಳನ್ನು ಸಿಡಿಸಿ ದೇಶಕ್ಕೆ ನಾಶ ನಷ್ಟ ಮಾಡುತ್ತಿದ್ದರು. ಇಂದು ಮೋದಿಯವರ ಅಧಿಕಾರಾವಧಿಯಲ್ಲಿ ಉಗ್ರರು ಕೂಡ ಸ್ವದೇಶಿ ತಂತ್ರಜ್ಞಾನವನ್ನು ಬಳಸಿ ಬಾಂಬ್‌ಗಳನ್ನು ತಯಾರಿಸಲು ಕಲಿತಿದ್ದಾರೆ. ಸನಾತನ ಸಂಸ್ಥೆ ಈಗಾಗಲೇ ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ದೇಶಾದ್ಯಂತ ಗುಡಿಕೈಗಾರಿಕೆಗಳನ್ನು ತೆರೆದಿದೆ. ಅಲ್ಲಿ ಯುವಕರಿಗೆ ಸ್ವದೇಶಿ ತಂತ್ರಜ್ಞಾನದಿಂದ ಬಾಂಬ್‌ಗಳನ್ನು ತಯಾರಿಸಲು ತರಬೇತಿ ನೀಡುತ್ತಿದೆ. ನಿರುದ್ಯೋಗ ನಿರುದ್ಯೋಗ ಎಂದು ಕೂಗಾಡುತ್ತಿರುವವರು ಸನಾತನ ಸಂಸ್ಥೆ ನಡೆಸುತ್ತಿರುವ ಈ ಉದ್ದಿಮೆಯನ್ನು ಗುರುತಿಸುವುದು ಬಿಟ್ಟು, ಅವರ ತಲೆಗೆ ಉಗ್ರರ ಪಟ್ಟ ಕಟ್ಟುವುದನ್ನು ನೋಡಿ ಕರುಳು ಕಿತ್ತು ಬರುತ್ತೆ ಕಣ್ರೀ...’’ ಎಂದು ಸಾರ್ವಜನಿವಾಗಿ ಹೊಟ್ಟೆಯನ್ನು ಹಿಂಡಿಕೊಂಡರು.
‘‘ಸಾರ್...ನೀವು ಹಾಗಾದರೆ ಉಗ್ರವಾದವನ್ನು, ಭಯೋತ್ಪಾದನೆಯನ್ನು ಬೆಂಬಲಿಸುತ್ತೀರಾ ಸಾರ್...ಹಾಗಾದರೆ ಉಗ್ರರ ಬಂಧನ ಎಂಬ ಸುದ್ದಿ ಕೇಳಿದಾಕ್ಷಣ ಬೀದಿಯಲ್ಲಿ ಪ್ರತಿಭಟನೆ ಮಾಡಿದ್ದು ಯಾಕೆ?’’ ಕಾಸಿ ಪಟ್ಟು ಬಿಡದೆ ಕೇಳಿದ.
‘‘ನೋಡ್ರಿ...ನಾನು ಅಪ್ಪಟ ಸ್ವದೇಶಿ ವಾದಿ. ಖಾದಿಯನ್ನೇ ಧರಿಸಿ ಓಡಾಡುತ್ತಿದ್ದೇನೆ. ವಿದೇಶಿ ಚಿಂತನೆಗಳನ್ನು ವಿರೋಧಿಸುತ್ತೇನೆ. ಈ ಹಿನ್ನೆಲೆಯಲ್ಲಿ ನಾನು ವಿರೋಧಿಸಿದ್ದು. ಆದರೆ ಸನಾತನ ಸಂಸ್ಥೆ ಅಪ್ಪಟ ಸ್ವದೇಶಿಯಾದುದು. ಅವರು ತಯಾರಿಸುವ ಉಗ್ರವಾದ ಚಿಂತನೆಗಳು ಸ್ವದೇಶಿಯಾಗಿದೆ. ನಾವು ವಿದೇಶಿ ಉಗ್ರವಾದವನ್ನು ಅಳಿಸಿ, ಅಲ್ಲಿ ಸ್ವದೇಶಿ ಉಗ್ರವಾದವನ್ನು ಬೆಳೆಸಬೇಕಾಗಿದೆ. ಪುರಾಣದಿಂದ ಹಿಡಿದು ಪ್ರಾಚೀನ ಪರಂಪರೆಯಲ್ಲಿ ಸಾಕಷ್ಟು ಉಗ್ರವಾದಿ ಚಿಂತನೆಗಳಿವೆ. ಅದನ್ನು ಬಳಸಿಕೊಂಡು ಸ್ವದೇಶಿ ಉಗ್ರವಾದವನ್ನು ಸನಾತನಸಂಸ್ಥೆ ರೂಪಿಸಿದೆ. ವಿಶ್ವಕ್ಕೆ ಇದು ಭಾರತದ ಅತ್ಯುತ್ತಮ ಕೊಡುಗೆಯಾಗಿದೆ. ಹಾಗೆಯೇ ವಿದೇಶಿ ಉಗ್ರರಿಗೆ ಭಾರತೀಯತೆಯ ಮೂಲಕ ಸನಾತನ ಸಂಸ್ಥೆ ಹಾಕಿದ ಸವಾಲಾಗಿದೆ...’’ ಬೇಳೆ ಸೂಳಿ ಮುಂದುವರಿಸಿದರು.
‘‘ಸಾರ್...ಹಾಗಾದರೆ ಉಗ್ರರಿಗೆ ಶಿಕ್ಷೆಯಾಗಬೇಡವೆ?’’ ಕಾಸಿ ಕೇಳಿದ.
‘‘ನೋಡ್ರೀ...ಶಿಕ್ಷೆಯಾಗಬೇಕೋ ಬೇಡವೋ ಎಂದು ಹೇಳುವುದಕ್ಕೆ ನ್ಯಾಯಾಲಯವಿದೆ. ಸ್ವದೇಶಿ ಸನಾತನ ಚಿಂತನೆಯನ್ನು ಬೆಳೆಸಿದ ನೂರಾರು ನ್ಯಾಯಾಧೀಶರು ಈಗಾಗಲೇ ನಮ್ಮ ನ್ಯಾಯಾಲಯದಲ್ಲಿ ಸೇರಿಕೊಂಡಿದ್ದಾರೆ. ಸನಾತನ ಸಂಸ್ಥೆಯವರದು ಉಗ್ರವಾದವೋ ಅಲ್ಲವೋ ಎನ್ನುವುದನ್ನು ಅವರೇ ನಿರ್ಧರಿಸುತ್ತಾರೆ. ಆದುದರಿಂದ ನೀವು ಅವರನ್ನು ಉಗ್ರರು ಎಂದು ಕರೆಯಬೇಡಿ...ಅದನ್ನು ನ್ಯಾಯಾಲಯಕ್ಕೆ ಬಿಡಿ. ಪತ್ರಿಕಾಧರ್ಮವನ್ನು ಕಾಪಾಡಿ.....’’
ಮರುದಿನ ಎಲ್ಲ ಪತ್ರಕರ್ತರು ಉಗ್ರರ ಬಂಧನದ ಸುದ್ದಿಯನ್ನು ಪ್ರಕಟವಾಗದಂತೆ ನೋಡಿಕೊಂಡು, ಪತ್ರಿಕಾಧರ್ಮವನ್ನು ಕಾಪಾಡಿದರು.

Writer - * ಚೇಳಯ್ಯ chelayya@gmail.com

contributor

Editor - * ಚೇಳಯ್ಯ chelayya@gmail.com

contributor

Similar News