ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಲವು ಬದಲಾವಣೆ

Update: 2018-08-12 12:43 GMT

2020ರಿಂದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಲವು ಮಹತ್ತರ ಬದಲಾವಣೆಗಳನ್ನು ಮಾಡಲು ಕಾರ್ಯಕ್ರಮ ವನ್ನು ಆಯೋಜಿಸುವ ಅಕಾಡಮಿ ಆಫ್ ಮೋಶನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸಯನ್ಸ್ ಉದ್ದೇಶಿಸಿದೆ. ಜನಪ್ರಿಯ ಚಿತ್ರ ವಿಭಾಗದಲ್ಲಿ ಅಭೂತಪೂರ್ವ ಸಾಧನೆ ಪ್ರಶಸ್ತಿ, ಕಾರ್ಯಕ್ರಮದ ಅವಧಿಯಲ್ಲಿ ಕಡಿತ ಇತ್ಯಾದಿ ಸೇರಿದಂತೆ ಹಲವು ಬದಲಾವಣೆಗಳನ್ನು ತರಲು ಅಕಾಡಮಿ ನಿರ್ಧರಿಸಿದೆ. ಮಂಗಳವಾರ ಜಾನ್ ಬೈಲಿಯನ್ನು ಅಕಾಡಮಿಯ ಅಧ್ಯಕ್ಷರಾಗಿ ಮರುನೇಮಕ ಮಾಡಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮುಖ್ಯವಾಗಿ 2019ರ ಫೆಬ್ರವರಿ 24ರಂದು ನಡೆಯಲಿರುವ 91ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ, ಕಾರ್ಯಕ್ರಮ ಕುಸಿಯುತ್ತಿರುವ ರೇಟಿಂಗ್ಸ್ ಹಾಗೂ ಸದ್ಯ ಇರುವ ಪ್ರೇಕ್ಷಕರನ್ನು ಹಿಡಿದಿಟ್ಟು ಹೋದ ಪ್ರೇಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಕೇವಲ ಗಂಭೀರ ಹಾಗೂ ಕಲಾತ್ಮಕ ರೀತಿಯ ಸಿನೆಮಾಗಳಿಗೆ ಪ್ರಶಸ್ತಿಗಳನ್ನು ನೀಡುವ ಬದಲು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಎನಿಸಿರುವ ಮತ್ತು ಪ್ರೇಕ್ಷಕರಿಂದ ಪ್ರಶಂಸೆಗೆ ಪಾತ್ರವಾಗಿರುವ ಚಿತ್ರಗಳಿಗೂ ಪ್ರಶಸ್ತಿಯನ್ನು ನೀಡುವ ಉದ್ದೇಶದಿಂದ ಹೊಸ ಪ್ರಶಸ್ತಿ ವಿಭಾಗವನ್ನು ರಚಿಸಲಾಗಿದೆ. ಜನರು ಇಷ್ಟಪಟ್ಟು ಟಿಕೆಟ್ ಖರೀದಿಸಿ ನೋಡುವ ಸಿನೆಮಾಗಳಿಗೂ ಅಕಾಡಮಿ ಪ್ರಶಸ್ತಿಗಳನ್ನು ನೀಡುತ್ತಿರುವ ಸಿನೆಮಾಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಹಾಗಾಗಿ ಜನರು ಆಸ್ಕರ್ ಪ್ರಶಸ್ತಿಯ ಬಗ್ಗೆ ಅಷ್ಟೊಂದು ಆಸಕ್ತಿ ಹೊಂದಿಲ್ಲ ಎನ್ನುವುದು ಸಿನೆಮಾ ಪಂಡಿತರ ಮಾತು. ಸದ್ಯ ಹೊಸ ವಿಭಾಗದ ರಚನೆಯಿಂದ ಹಿಟ್ ಸಿನೆಮಾಗಳಾದ ಬ್ಲಾಕ್ ಪ್ಯಾಂಥರ್, ಮಿಶನ್: ಇಂಪಾಸಿಬಲ್-ಫಾಲೌಟ್ ಮತ್ತು ಆ್ಯವೆಂಜರ್ಸ್: ಇನ್ಫಿನಿಟಿ ವಾರ್ ಮುಂತಾದವುಗಳೂ ಪ್ರಶಸ್ತಿ ಪಡೆಯಲು ಸ್ಪರ್ಧಿಸುತ್ತಿರುವ ಸಿನೆಮಾಗಳ ಸಾಲಿನಲ್ಲಿ ಬಂದು ನಿಲ್ಲುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News