ವಿವಿ ಪ್ಯಾಟ್ ವೈಫಲ್ಯ: ಮೀಸಲು ವಿವಿ ಪ್ಯಾಟ್ ಹೆಚ್ಚಿಸಲು ಚುನಾವಣಾ ಆಯೋಗ ನಿರ್ಧಾರ
ಹೊಸದಿಲ್ಲಿ, ಆ. 12: ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಿವಿ ಪ್ಯಾಟ್‌ಗಳ ವಿಫಲತೆಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೀಸಲು ವಿವಿ ಪ್ಯಾಟ್‌ಗಳ ಸಂಗ್ರಹವನ್ನು ಶೇ. 10 ಹೆಚ್ಚಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ರೂ. 250.16 ಕೋ. ರೂ. ವೆಚ್ಚದ 1.3 ಲಕ್ಷ ಹೆಚ್ಚುವರಿ ವಿವಿ ಪ್ಯಾಟ್‌ಗಳಿಗೆ ಚುನಾವಣಾ ಆಯೋಗ ಜೂನ್ 20ರಂದು ಆದೇಶ ನೀಡಿದೆ. ಇದರಿಂದ ವಿವಿ ಪ್ಯಾಟ್‌ಗಳ ಮೀಸಲು ಶೇ. 25ರಿಂದ ಸೇ. 35ಕ್ಕೆ ಏರಿಕೆಯಾಗಲಿದೆ. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಸಂದರ್ಭ ಎಲ್ಲ ಮತಗಟ್ಟೆಗಳು ವಿವಿ ಪ್ಯಾಟ್‌ಗಳನ್ನು ಹೊಂದುವ ಉದ್ದೇಶದಿಂದ ಈಗಾಗಲೇ ಎರಡು ಸಾರ್ವಜನಿಕ ರಂಗದ ಉದ್ದಿಮೆಗಳಿಗೆ ನೀಡಲಾದ 16.15 ಲಕ್ಷ ವಿ.ವಿ. ಪ್ಯಾಟ್‌ಗಳನ್ನು ಪೂರೈಸುವ ಆದೇಶದಿಂದ ಹೊರತಾಗಿ ಆದೇಶ ಇದಾಗಿದೆ.
ಮುಂದಿನ ಲೋಕಸಭಾ ಚುನಾವಣೆಗೆ 2018 ಸೆಪ್ಟಂಬರ್ ಗಡುವಿನ ಒಳಗಡೆ 16.15 ಲಕ್ಷ ವಿವಿ ಪ್ಯಾಟ್‌ಗಳನ್ನು ಹೊಂದುವುದಾಗಿ ಸುಪ್ರೀಂ ಕೋರ್ಟ್‌ಗೆ ನೀಡಿದ ಭರವಸೆ ಈಡೇರಿಸಲು ಚುನಾವಣಾ ಆಯೋಗ ಈಗಾಗಲೇ ಸಾಕಷ್ಟು ಹೋರಾಟ ನಡೆಸಿದೆ. ಈಗ ಚುನವಣಾ ಆಯೋಗ ನವೆಂಬರ್ ಅಂತ್ಯದಲ್ಲಿ ವಿವಿ ಪ್ಯಾಟ್‌ಗಳನ್ನು ಹೊಂದುವ ಭರವಸೆ ಇಟ್ಟುಕೊಂಡಿದೆ. ಜೂನ್ 10ರಂದು ಆದೇಶಿಸಲಾದ ಹೆಚ್ಚುವರಿ 1.3 ಲಕ್ಷ ವಿವಿ ಪ್ಯಾಟ್‌ಗಳಲ್ಲಿ 79,000 ವಿವಿ ಪ್ಯಾಟ್‌ಗಳನ್ನು ಬೆಂಗಳೂರಿನ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಉತ್ಪಾದಿಸಲಿದೆ. ಉಳಿದ ವಿವಿ ಪ್ಯಾಟ್‌ಗಳನ್ನು ಹೈದರಾಬಾದ್‌ನ ಇಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ಉತ್ಪಾದಿಸಲಿದೆ. ಈ ಎರಡು ಕಂಪೆನಿಗಳು ವಿವಿ ಪ್ಯಾಟ್‌ಗಳನ್ನು ಅಕ್ಟೋಬರ್ 30ರ ಒಳಗೆ ಪೂರೈಸುವ ಭರವಸೆಯನ್ನು ಚುನಾವಣಾ ಆಯೋಗ ಹೊಂದಿದೆ.
ಮೇ 28ರಂದು ಕೈರಾನ ಹಾಗೂ ಭಂಡಾರಾ ಗೋಂಡಿಯ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ವಿವಿ ಪ್ಯಾಟ್ ಕಾರ್ಯನಿರ್ವಹಿಸದೇ ಇರುವುದು ವರದಿಯಾಗಿತ್ತು. ಈ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಉತ್ತರಪ್ರದೇಶದ ಕೈರಾನದಲ್ಲಿ ಶೇ. 20.08 ಹಾಗೂ ಮಹಾರಾಷ್ಟ್ರದ ಭಂಡಾರ-ಗೊಂಡಿಯಾದಲ್ಲಿ ಶೇ. 19.22 ವಿವಿ ಪ್ಯಾಟ್‌ಗಳನ್ನು ಚುನಾವಣಾ ಆಯೋಗ ಬದಲಾಯಿಸಿತ್ತು. ಇದರಿಂದಾಗಿ ಕೈರಾನದ 73 ಮತಗಟ್ಟೆಗಳಲ್ಲಿ ಹಾಗೂ ಭಂಡಾರ-ಗೋಂಡಿಯಾದ 49 ಮತಗಟ್ಟೆಗಳಲ್ಲಿ ಮರು ಮತದಾನ ನಡೆದಿತ್ತು.