ಮುಂದಿನ 3 ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

Update: 2018-08-12 16:26 GMT

ಹೊಸದಿಲ್ಲಿ, ಆ. 12: ಕೇರಳದಲ್ಲಿ ಧಾರಾಕಾರ ಮಳೆ ಸುರಿದು ನೆರೆ ಹಾಗೂ ಭೂಕುಸಿತ ಸಂಭವಿಸುತ್ತಿರುವ ನಡುವೆ ಉತ್ತರಾಖಂಡದಲ್ಲಿ ಹಾಗೂ ಒಡಿಶಾ, ಚತ್ತೀಸ್‌ಗಢ, ತೆಲಂಗಾಣ, ಕರ್ನಾಟಕ, ಪೂರ್ವ ಉತ್ತರಪ್ರದೇಶದ ಭಾಗಗಳಲ್ಲಿ ಮುಂದಿನ 3 ದಿನಗಳ ಕಾಲ ತೀವ್ರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.

ಕೇರಳದಲ್ಲಿ ಭಾರೀ ಮಳೆ ಸಾಮಾನ್ಯವಾಗಿ ಸುರಿಯುತ್ತದೆ. ಆದರೆ, ಈ ರೀತಿ ನಿರಂತರವಾಗಿ ಸುರಿಯುವುದಿಲ್ಲ. ಈ ಬಾರಿ ಮಳೆ ವ್ಯಾಪಕವಾಗಿ ನಿರಂತರವಾಗಿ ಸುರಿದಿದೆ. ಇತ್ತೀಚಿಗಿನ ವರ್ಷಗಳಲ್ಲಿ ಈ ರೀತಿ ಮಳೆ ಸುರಿದಿರುವುದು ಇದೇ ಮೊದಲು. ನಮ್ಮ ಅಧ್ಯಯನದ ಪ್ರಕಾರ ಮಳೆಯ ತೀವ್ರತೆ ಮುಖ್ಯವಾಗಿ ಪಶ್ಚಿಮ ಕರಾವಳಿ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಾಗಲಿದೆ ಎಂದು ಪುಣೆ ಹವಾಮಾನ ಇಲಾಖೆಯಲ್ಲಿರುವ ಹವಾಮಾನ ಮುನ್ಸೂಚನೆ ತಂಡದ ಮುಖ್ಯಸ್ಥ ಡಾ. ಡಿ.ಎಸ್. ಪೈ ಹೇಳಿದ್ದಾರೆ.

ಮಧ್ಯ ಭಾರತದಲ್ಲಿ ನೆರೆಯಿಂದ ದುರಂತ ಸಂಭವಿಸುವ ಸಾಧ್ಯತೆ ಇದೆ. ಈ ಭಾಗದಲ್ಲಿ ತೀವ್ರ ಹಾಗೂ ನಿರಂತರ ಮಳೆ ಹೆಚ್ಚಾಗಲಿದೆ ಎಂದು ‘ಕ್ಲೈಮ್ಯಾಟ್ ಡೈನಾಮಿಕ್ಸ್ ಜರ್ನಲ್’ನಲ್ಲಿ ಪ್ರಕಟವಾದ ಹವಾಮಾನ ಇಲಾಖೆಯ ವಿಜ್ಞಾನಿಗಳು ಸಂಶೋಧನಾ ಲೇಖನ ಹೇಳಿತ್ತು.

ಕರಾವಳಿ, ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಉಡುಪಿ ಹಾಗೂ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆ ಸುರಿಯಲಿದೆ ಎಂದು ಕರ್ನಾಟಕ ರಾಜ್ಯ ಪ್ರಾಕೃತಿಕ ವಿಪತ್ತು ನಿಗಾ ಕೇಂದ್ರದ ನಿರ್ದೇಶಕ ಜಿ.ಎಸ್. ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

ಮಳೆ ಸಂತ್ರಸ್ತ ಕೇರಳಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರವಿವಾರ ಹೆಚ್ಚುವರಿ 100 ಕೋ. ರೂ. ತುರ್ತು ಪರಿಹಾರ ಘೋಷಿಸಿದ್ದಾರೆ. ಭಾರೀ ಮಳೆಯಿಂದ ಕೇರಳದ ಜನರು ತೊಂದರೆಗೊಳಗಾಗುತ್ತಿರುವುದು ನನಗೆ ಅರ್ಥವಾಗುತ್ತಿದೆ. ಹಾನಿ ಅಂದಾಜಿಸಲು ತುಂಬಾ ಸಮಯ ತೆಗೆದುಕೊಳ್ಳಬಹುದು. ನಾನೀಗ ತುರ್ತು ಪರಿಹಾರವಾಗಿ ಹೆಚ್ಚುವರಿ 100 ಕೋ. ರೂ. ಘೋಷಿಸುತ್ತಿದ್ದೇನೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News