ಸಂವಿಧಾನವನ್ನು ಸುಟ್ಟ ಬೆಂಕಿ ದೇಶವನ್ನೂ ಸುಟ್ಟೀತು

Update: 2018-08-13 05:58 GMT

ಸರ್ವಜನಾಂಗದ ಶಾಂತಿಯ ತೋಟದ ಜನರ ಬಹುಮುಖಿ ಭಾರತವನ್ನು ನಾಶ ಮಾಡಲು ಕೆಲ ಕೋಮುವಾದಿ ಶಕ್ತಿಗಳು ಹುನ್ನಾರ ನಡೆಸಿವೆ. ಅವೇ ಶಕ್ತಿಗಳು ಹೊಸದಿಲ್ಲಿಯಲ್ಲಿ ಸಂವಿಧಾನಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿವೆ. ಡಾ. ಬಿ.ಆರ್.ಅಂಬೇಡ್ಕರ್ ರೂಪಿಸಿದ ಈ ಸಂವಿಧಾನವನ್ನು ಇಡೀ ದೇಶವೇ ಒಪ್ಪಿದೆ. ಜಗತ್ತೇ ಕೊಂಡಾಡುತ್ತಿದೆ. ಈ ಸಂವಿಧಾನ ದೇಶದ ಕೋಟ್ಯಂತರ ಜನರ ಬದುಕಿಗೆ ಬೆಳಕನ್ನು ನೀಡಿದೆ. ಆದರೆ ದೇಶವನ್ನು ಮನುವಾದಿ ಹಿಂದೂ ರಾಷ್ಟ್ರ ಮಾಡಲು ಹೊರಟಿರುವ ಕರಾಳ ಶಕ್ತಿಗಳಿಗೆ ಅವರ ಅಜೆಂಡಾ ಜಾರಿಗೊಳಿಸಲು ಸಂವಿಧಾನ ಅಡ್ಡಿಯಾಗಿದೆ. ಅದಕ್ಕಾಗಿ ಅದನ್ನು ನಾಶ ಮಾಡಲು ಹುನ್ನಾರ ನಡೆಸಿದ್ದಾರೆ. ಹಂತಹಂತವಾಗಿ ವ್ಯವಸ್ಥಿತವಾಗಿ ಸಂಚು ರೂಪಿಸುತ್ತಿದ್ದಾರೆ.

ದೇಶವು ಜಾತ್ಯತೀತ ಮತ್ತು ಸೌಹಾರ್ದದ ತಳಹದಿಯ ಮೇಲೆ ಇರುವುದು ಕೋಮುವಾದಿ ಶಕ್ತಿಗಳಿಗೆ ಸಹಿಸಲಾಗುತ್ತಿಲ್ಲ. ಏಕಧರ್ಮೀಯ ರಾಷ್ಟ್ರ ನಿರ್ಮಿಸುವ ಗುರಿ ಹೊಂದಿರುವ ಅವರಿಗೆ ಅಂಬೇಡ್ಕರ್ ರಚಿಸಿದ ಸಂವಿಧಾನ ಬೇಕಾಗಿಲ್ಲ. ಅದರಲ್ಲಿನ ಅಂಶಗಳನ್ನು ಸಮರ್ಪಕವಾಗಿ ಜಾರಿಗೊಳಿಸುವುದು ಅವರಿಗೆ ಇಷ್ಟವಿಲ್ಲ. ಸರ್ವರಿಗೂ ಸಮಾನ ಆದ್ಯತೆ ನೀಡಿರುವ ಸಂವಿಧಾನವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಇದು ಇತ್ತೀಚಿನ ವರ್ಷಗಳ ಬೆಳವಣಿಗೆಯಲ್ಲ. ಅಂಬೇಡ್ಕರ್ ಅವರು ಸಂವಿಧಾನ ರಚಿಸುತ್ತಿದ್ದ ದಿನಗಳಲ್ಲಿ ಮತ್ತು ನಂತರದ ದಿನಗಳಿಂದಲೂ ಷಡ್ಯಂತ್ರ ನಡೆದುಕೊಂಡು ಬಂದಿದೆ. ಸಂವಿಧಾನ ರಚನೆ ಸಂದರ್ಭದಲ್ಲಿ ಅಂಬೇಡ್ಕರ್ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ಸಂಸತ್ತಿನಲ್ಲೂ ಮತ್ತು ಹೊರಗೂ ಅವರು ಮಾನಸಿಕ ಹಿಂಸೆ ಅನುಭವಿಸಬೇಕಾಯಿತು.

ಸಂವಿಧಾನ ಸುಟ್ಟು ಏಕಧರ್ಮೀಯ ರಾಷ್ಟ್ರ ನಿರ್ಮಿಸುವ ಸಂಚು ಒಂದೆಡೆ ನಡೆದಿದ್ದರೆ, ಮತ್ತೊಂದೆಡೆ ಗೋ ಸಂರಕ್ಷಣೆ ಮತ್ತು ಸಂಸ್ಕೃತಿ ಹೆಸರಿನಲ್ಲಿ ಅಮಾಯಕರ ಮೇಲೆ ದೌರ್ಜನ್ಯವೂ ಹೆಚ್ಚಿದೆ. ಗೋ ಸಂರಕ್ಷಣೆ ಹೆಸರಿನಲ್ಲಿ ವಿನಾಕಾರಣ ಅಲ್ಪಸಂಖ್ಯಾತರು, ಶೂದ್ರರು ಮುಂತಾದವರ ಮೇಲೆ ಹಲ್ಲೆ ಮಾಡುವುದರ ಜೊತೆಗೆ ಪ್ರಾಣಕ್ಕೂ ಅಪಾಯ ಮಾಡಲಾಗುತ್ತಿದೆ. ಈ ದೇಶದಲ್ಲಿ ಬಾಳಬೇಕಿದ್ದರೆ ಇಂತಹದ್ದೇ ಸಂಸ್ಕೃತಿ ಅನುಸರಿಸಬೇಕು ಮತ್ತು ಹೀಗೇ ಬಾಳಬೇಕೆಂದು ಒತ್ತಡ ಹೇರಲಾಗುತ್ತಿದೆ. ಅದಕ್ಕೆ ಒಪ್ಪದಿದ್ದರೆ, ಸಂಸ್ಕೃತಿ ರಕ್ಷಕರೆಂದು ಮನೆಗೆ ದಾಳಿ ಮಾಡಿ, ಕುಟುಂಬ ಸದಸ್ಯರ ಮೇಲೆ ದೌರ್ಜನ್ಯ ಎಸಗುತ್ತಾರೆ. ಮಾತು ಕೇಳದ ತಪ್ಪಿಗೆ ಶಿಕ್ಷೆಯೆಂದು ಅಮಾನುಷವಾಗಿ ಹತ್ಯೆ ಮಾಡುತ್ತಾರೆ. ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯಿದೆ. ಜನರ ಸುರಕ್ಷತೆಗಾಗಿ ಪೊಲೀಸ್ ವ್ಯವಸ್ಥೆ ಇದೆ ಎಂಬುದನ್ನು ಸಹ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ತಾವು ಮಾತ್ರ ದೇಶಭಕ್ತರು-ದೇಶರಕ್ಷಕರು ಎಂಬಂತೆ ವಿಕೃತವಾಗಿ ವರ್ತಿಸುತ್ತಾರೆ.

ದೇಶದಲ್ಲಿ ಅಸಹನೆ ವ್ಯಾಪಕವಾಗಿದೆ, ಇಲ್ಲಿ ಬದುಕುವುದು ಕಷ್ಟವಾಗಿದೆ ಎಂದು ಕೆಲ ವರ್ಷಗಳ ಹಿಂದೆ ಖ್ಯಾತನಾಮರು ಹೇಳಿದಾಗ, ತೀವ್ರ ವಿವಾದ ಸೃಷ್ಟಿಯಾಗಿತ್ತು. ಈ ದೇಶದಲ್ಲಿ ಬದುಕಲು ಸಾಧ್ಯವಾಗದಿದ್ದರೆ, ಬೇರೆ ದೇಶಕ್ಕೆ ಹೋಗಲು ಕೆಲವರು ಒತ್ತಡ ಹೇರಿದ್ದರು. ಅಷ್ಟೇ ಅಲ್ಲ, ಆ ಖ್ಯಾತನಾಮರಿಗೆ ಪ್ರಾಣ ಬೆದರಿಕೆಯನ್ನು ಒಡ್ಡಿದ್ದರು. ಆದರೆ ಸಂವಿಧಾನ ಸುಡುವುದು, ಅಮಾಯಕರ ಮೇಲೆ ಹಲ್ಲೆ ಮಾಡುವುದು, ಸಂಸ್ಕೃತಿ ರಕ್ಷಣೆ ಹೆಸರಿನಲ್ಲಿ ದಬ್ಬಾಳಿಕೆ ನಡೆಸುವುದು ಅಸಹಿಷ್ಣುತೆಯ ಪರಮಾವ ಅಲ್ಲದೆ ಮತ್ತೇನು? ದೇಶದಲ್ಲಿನ ನೈಜ ಪರಿಸ್ಥಿತಿ, ಕೋಮುವಾದಿಗಳ ದೌರ್ಜನ್ಯ, ವೌಢ್ಯ-ಕಂದಾಚಾರ, ಧಾರ್ಮಿಕ ಮೂಲಭೂತವಾದದ ಬಗ್ಗೆ ಬರೆದ ಗೋವಿಂದ ಪನ್ಸಾರೆ, ನರೇಂದ್ರ ದಾಭೋಲ್ಕ್ಕರ್, ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಯಾಗಿದ್ದು ಅಸಹನೆಯ ಲಕ್ಷಣವಲ್ಲದೆ ಮತ್ತೇನಾಗಲೂ ಸಾಧ್ಯ. ತಮ್ಮ ವಿರುದ್ಧ ಯಾರಾದರೂ ಧ್ವನಿಯೆತ್ತಿದರೆ, ಅವರಿಗೆ ಇಂಥದ್ದೇ ಶಿಕ್ಷೆ ಕಾದಿದೆ ಎಂದು ಭಯಭೀತ ವಾತಾವರಣ ನಿರ್ಮಿಸುವ ಪ್ರಯತ್ನ ನಡೆದಿದೆ.

ಸಂವಿಧಾನದಲ್ಲಿನ ಅಂಶಗಳನ್ನು ಪಾಲಿಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಜವಾಬ್ದಾರಿ ಮತ್ತು ಕರ್ತವ್ಯ. ಅದರಲ್ಲಿನ ಅಂಶಗಳನ್ನು ಕ್ಕರಿಸಿದರೆ ಅಥವಾ ಅದರ ವಿರುದ್ಧ ನಡೆದುಕೊಂಡರೆ, ಅದು ಕಾನೂನಿಗೆ ವಿರುದ್ಧವಾದದ್ದು ಎಂದರ್ಥ. ದೇಶಕ್ಕೆ ಸಂವಿಧಾನವೊಂದೇ ಪವಿತ್ರ ಗ್ರಂಥ. ಸಂವಿಧಾನದಲ್ಲಿನ ನಿಯಮಗಳನ್ನು ಪಾಲಿಸದಿರುವುದು ಕಾನೂನು ಬಾಹಿರವಾದರೆ, ಸಂವಿಧಾನವನ್ನೇ ಸುಡುವುದು ದೇಶದ್ರೋಹಕ್ಕೆ ಸಮವಾದ ಕೃತ್ಯ. ಈ ಕೃತ್ಯದಲ್ಲಿ ತೊಡಗಿದ ವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಂತಹ ಘಟನೆ ಪುನಃ ಜರುಗದಂತೆ ಕ್ರಮ ತೆಗೆದುಕೊಳ್ಳಬೇಕು.

ಸಂವಿಧಾನದ ಅಸ್ತಿತ್ವಕ್ಕೆ ಅಪಾಯವಾಗುತ್ತಿರುವ ಇಂದಿನ ದಿನಗಳಲ್ಲಿ ಸಂವಿಧಾನ ರಕ್ಷಣೆಗಾಗಿ ಅಭಿಯಾನ ಕೈಗೊಳ್ಳಬೇಕು. ಸಂವಿಧಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯೂ ಕೈಜೋಡಿಸಬೇಕು. ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಕಾನೂನು ಬದ್ಧ ಬಾಳ್ವೆಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಅವಕಾಶ ಮಾಡಿಕೊಟ್ಟಿದೆ. ವಿವಿಧ ದೇಶಗಳ ಸಂವಿಧಾನ ಗಳಲ್ಲಿನ ವೌಲ್ಯಯುತ ವೈಚಾರಿಕ ಅಂಶಗಳನ್ನು ಆಧರಿಸಿ ಅಂಬೇಡ್ಕರ್ ಸಿದ್ಧಪಡಿಸಿರುವ ಸಂವಿಧಾನ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸುಭದ್ರ ಬುನಾದಿ ಮತ್ತು ಅಡಿಪಾಯ ಎಂಬುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಇಂದಿನ ಅಪಾಯಕಾರಿ ಮತ್ತು ಭಯಗ್ರಸ್ತ ವಾತಾವರಣವನ್ನು ಹೋಗಲಾಡಿಸಿ, ಸಂವಿಧಾನದ ಬೆಳಕಿನಲ್ಲಿ ದೇಶ ಕಟ್ಟುವ ಕಾರ್ಯಕ್ಕೆ ಆದ್ಯತೆ ನೀಡಬೇಕು. ಅದರ ಯಶಸ್ಸಿಗೆ ನಿರಂತರ ಅಭಿಯಾನ ನಡೆಯಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News