ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆ: ಮೈಕ್ರೋಸಾಫ್ಟ್‌ನಿಂದ ಡಿಜಿಟಲ್ ಪರಿಹಾರ

Update: 2018-08-13 14:40 GMT

ಹೊಸದಿಲ್ಲಿ, ಆ. 12: ಕಳೆದ ವರ್ಷ ಹತ್ತನೇ ತರಗತಿ ಗಣಿತ ಹಾಗೂ 12ನೇ ತರಗತಿ ಅರ್ಥಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆ ಆದ ಬಳಿಕ ತೀವ್ರ ಟೀಕೆಗೆ ಗುರಿಯಾಗಿರುವ ಸಿಬಿಐಸ್‌ಇ ಇಂತಹ ಸೋರಿಕೆ ತಡೆಯಲು ಮೈಕ್ರೋಸಾಫ್ಟ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ದೇಶಾದ್ಯಂತ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರು ಸಿಬಿಐಸ್‌ಇಯನ್ನು ತೀವ್ರವಾಗಿ ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಮೈಕ್ರೋಸಾಫ್ಟ್‌ನ ಸಹಭಾಗಿತ್ವದಿಂದ ಸೋರಿಕೆಯಾಗದ ಡಿಜಿಟಲ್ ಪ್ರಶ್ನೆ ಪತ್ರಿಕೆಯನ್ನು ಮೂರು ತಿಂಗಳ ಒಳಗೆ ಅಭಿವೃದ್ಧಿಪಡಿಸಿದೆ. 

ಸಿಬಿಎಸ್‌ಇಗಾಗಿ ಸೋರಿಕೆಯಾಗದ ಪ್ರಶ್ನೆಪತ್ರಿಕೆಯನ್ನು ನಾವು ಅಭಿವೃದ್ಧಿಪಡಿಸಿದ್ದೇವೆ ಎಂದು ಕ್ಲೌಡ್ ಎಂಟರ್‌ಪ್ರೈಸಸ್‌ನ ಕಾರ್ಪೋರೇಟ್ ಉಪಾಧ್ಯಕ್ಷ ಹಾಗೂ ಮೈಕ್ರೋಸಾಫ್ಟ್ ಇಂಡಿಯಾದ ಆಡಳಿತ ನಿರ್ದೇಶಕ ಅನಿಲ್ ಬನ್ಸಾಲಿ ಹೇಳಿದ್ದಾರೆ. ಪರೀಕ್ಷೆ ಆರಂಭವಾಗುವುದಕ್ಕೆ ಅರ್ಧ ಗಂಟೆ ಮುನ್ನ ಪ್ರಶ್ನೆ ಪತ್ರಿಕೆ ಡೌನ್‌ಲೋಡ್ ಮಾಡಲು ಸಾಧ್ಯವಾಗಲಿದೆ. ಒಂದು ವೇಳೆ ಈ ಸಂದರ್ಭ ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ, ಪ್ರಶ್ನೆ ಪತ್ರಿಕೆಯಲ್ಲಿ ವಾಟರ್ ಮಾರ್ಕ್ ಇರುವುದರಿಂದ ಯಾವ ಕೇಂದ್ರದಲ್ಲಿ ಸೋರಿಕೆ ಆಗಿದೆ ಎಂಬುದು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಡಿಜಿಟಲ್ ಪ್ರಶ್ನೆ ಪತ್ರಿಕೆ ರೂಪಿಸುವ ತನ್ನ ಮೊದಲ ಪ್ರಮುಖ ಯೋಜನೆಯನ್ನು ಸಿಬಿಎಸ್‌ಇ ಹಾಗೂ ಮೈಕ್ರೋಸಾಫ್ಟ್ ಜುಲೈಯಲ್ಲಿ ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ. ಮುಂದಿನ 10ನೇ ತರಗತಿ ಪರೀಕ್ಷೆಗ ಈ ಡಿಜಿಟಲ್ ಪ್ರಶ್ನೆಪತ್ರಿಕೆ ಪೂರೈಕೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಪರೀಕ್ಷೆ ನಡೆಯುವ 30 ನಿಮಿಷ ಮೊದಲು ಮಾತ್ರ ಪ್ರಶ್ನೆ ಪತ್ರಿಕೆ ಡೌನ್‌ಲೋಡ್ ಮಾಡಲು ಸಾಧ್ಯ. ಪ್ರಶ್ನೆ ಪತ್ರಿಕೆ ಡೌನ್ ಲೋಡ್ ಮಾಡಲು ಪರೀಕ್ಷಕರು ತಮ್ಮ ಗುರುತು ನೀಡಬೇಕಾಗುತ್ತದೆ. ಈ ವ್ಯವಸ್ಥೆ ಹಲವು ದೃಢೀಕರಣ ಪ್ರಕ್ರಿಯೆ ಹೊಂದಿದೆ. ಉದಾಹರಣೆಗೆ ಇದು ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಅಥವಾ ಬಯೋಮೆಟ್ರಿಕ್ ಆಧಾರವಾಗಿ ಇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News