ಬೇಡವೆಂದರೂ ಗೂಗಲ್ ನಿಮ್ಮ ಚಲನವಲನ ದಾಖಲಿಸುತ್ತದೆ!

Update: 2018-08-13 17:00 GMT

ಸ್ಯಾನ್‌ಫ್ರಾನ್ಸಿಸ್ಕೊ, ಆ. 13: ನಿಮ್ಮ ಎಲ್ಲ ಚಟುವಟಿಕೆಗಳ ವಿವರಗಳೂ ತಂತ್ರಜ್ಞಾನ ದೈತ್ಯ ‘ಗೂಗಲ್’ಗೆ ಬೇಕು! ಎಷ್ಟೆಂದರೆ, ನಿಮ್ಮ ಚಲನವಲನಗಳನ್ನು ದಾಖಲಿಸದಂತೆ ನೀವು ಸ್ಪಷ್ಟವಾಗಿ ಹೇಳಿದ ಬಳಿಕವೂ ಅದು ದಾಖಲಿಸಿಕೊಳ್ಳುತ್ತದೆ.

ಆ್ಯಂಡ್ರಾಯ್ಡ್ ಸಾಧನಗಳು ಮತ್ತು ಐಫೋನ್ ಸ್ಟೋರ್‌ಗಳಲ್ಲಿ ಲಭಿಸುವ ಹಲವಾರು ಗೂಗಲ್ ಸೇವೆಗಳು ಬಳಕೆದಾರರು ಇರುವ ಸ್ಥಳದ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ ಹಾಗೂ ಹೀಗೆ ಮಾಡದಂತೆ ನೀವು ಸೆಟ್ಟಿಂಗ್ಸ್‌ನಲ್ಲಿ ಸೂಕ್ತ ತಿದ್ದುಪಡಿಗಳನ್ನು ಮಾಡಿದರೂ ಇಂಥ ಮಾಹಿತಿಗಳು ದಾಖಲಾಗುತ್ತವೆ ಎನ್ನುವುದು ‘ಅಸೋಸಿಯೇಟಡ್ ಪ್ರೆಸ್’ ಸುದ್ದಿ ಸಂಸ್ಥೆ ನಡೆಸಿದ ತನಿಖೆಯಲ್ಲಿ ಹೊರಬಿದ್ದಿದೆ.

ಅಸೋಸಿಯೇಟಡ್ ಪ್ರೆಸ್‌ನ ವಿನಂತಿಯಂತೆ, ಪ್ರಿನ್ಸ್‌ಟನ್‌ನಲ್ಲಿರುವ ಕಂಪ್ಯೂಟರ್ ವಿಜ್ಞಾನ ಸಂಶೋಧಕರು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ.

ನೀವು ‘ಗೂಗಲ್ ಮ್ಯಾಪ್ಸ್’ ಆ್ಯಪ್ ಬಳಸಿದರೆ ಹಾಗೂ ನಿಮ್ಮ ಸ್ಥಳವನ್ನು ದಾಖಲಿಸಲು ಅನುಮತಿ ನೀಡಿದರೆ, ಅದನ್ನು ‘ಟೈಮ್‌ಲೈನ್’ನಲ್ಲಿ ಗೂಗಲ್ ನಿಮ್ಮ ಮುಂದಿಡುತ್ತದೆ.

ಆದರೆ, ನೀವು ‘ಪಾಸ್’ ಬಟನನ್ನು ಬಳಸಿದರೆ, ನೀವು ಎಲ್ಲಿದ್ದೀರಿ ಎನ್ನುವುದನ್ನು ಗೂಗಲ್ ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ ಎಂದು ಅದು ಹೇಳುತ್ತದೆ.

ಆದರೆ, ಅದು ಸುಳ್ಳು. ನಿಮ್ಮ ‘ಲೊಕೇಶನ್ ಹಿಸ್ಟರಿ’ಯನ್ನು ‘ಪಾಸ್’ ಮಾಡಿದರೂ, ಗೂಗಲ್ ಆ್ಯಪ್‌ಗಳು ಸ್ವಯಂಪ್ರೇರಿತವಾಗಿ ನೀವು ಭೇಟಿ ನೀಡಿದ ಸ್ಥಳಗಳನ್ನು ದಾಖಲಿಸಿಕೊಳ್ಳುತ್ತದೆ ಎಂದು ತನಿಖೆಯಲ್ಲಿ ಬಯಲಾಗಿದೆ.

ಇದು ಖಾಸಗಿತನ ಉಲ್ಲಂಘನೆಯ ಅಪಾಯವನ್ನು ಒಡ್ಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News