ನರೋಡಾಗಾಂವ್ ಗಲಭೆ ಪ್ರಕರಣ; ಅಮಿತ್ ಶಾ ಹೇಳಿಕೆ ಪ್ರತಿವಾದಿಗಳಿಗೆ ನೆರವಾಗದು: ವಕೀಲರ ಹೇಳಿಕೆ

Update: 2018-08-13 18:04 GMT

ಅಹ್ಮದಾಬಾದ್, ಆ.13: 2002ರ ನರೋಡಾಗಾಂವ್ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಗುಜರಾತ್‌ನ ಮಾಜಿ ಸಚಿವೆ ಮಾಯಾ ಕೊಡ್ನಾನಿ ಪರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೀಡಿರುವ ಹೇಳಿಕೆ ಪ್ರತಿವಾದಿಗಳಿಗೆ ನೆರವಾಗುವುದಿಲ್ಲ ಎಂದು ಸಂತ್ರಸ್ತರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಶಾ ಅವರು ಪ್ರತಿವಾದಿಗಳ ಪರ ಸಾಕ್ಷ್ಯ ಹೇಳಲು ನ್ಯಾಯಾಲಯಕ್ಕೆ ಆಗಮಿಸಿದ್ದಾರೆ. ಆದರೆ ಅವರ ಹೇಳಿಕೆ ಮಾತ್ರ ಗಲಭೆ ಪ್ರಕರಣದಲ್ಲಿ ಪ್ರತಿವಾದಿಗಳಿಗೆ ನೆರವಾಗದು ಎಂದು ನ್ಯಾ. ಎಂ.ಕೆ.ದವೆ ನೇತೃತ್ವದ ನ್ಯಾಯಪೀಠಕ್ಕೆ ಸಲ್ಲಿಸಿದ ಲಿಖಿತ ಹೇಳಿಕೆಯಲ್ಲಿ ಸಂತ್ರಸ್ತರ ಪರ ವಕೀಲ ಶಂಸಾದ್ ಪಠಾಣ್ ತಿಳಿಸಿದ್ದಾರೆ.

ಗಲಭೆ ನಡೆದ ದಿನದಂದು ಬೆಳಿಗ್ಗೆ ಸುಮಾರು 8:30ರ ಸಮಯದಲ್ಲಿ ಸಚಿವೆ ಮಾಯಾ ರಾಜ್ಯ ವಿಧಾನಸಭೆಯಲ್ಲಿ ಉಪಸ್ಥಿತರಿದ್ದುದನ್ನು , ಬಳಿಕ 11:00 ಗಂಟೆಯ ವೇಳೆ ಅಹ್ಮದಾಬಾದ್‌ನ ಸೋಲ ಆಸ್ಪತ್ರೆಯಲ್ಲಿ ಇದ್ದುದನ್ನು ತಾನು ಕಂಡಿರುವುದಾಗಿ ಶಾ ಹೇಳಿಕೆ ನೀಡಿದ್ದರು. ಆದರೆ ಈ ಎರಡು ಸಂದರ್ಭಗಳ ನಡುವಿನ ಅವಧಿಯಲ್ಲಿ ಸಚಿವೆ ಎಲ್ಲಿದ್ದರು ಎಂಬುದು ತನಗೆ ತಿಳಿದಿಲ್ಲ ಎಂದು ಶಾ ಹೇಳಿದ್ದರು.

ಕೊಡ್ನಾನಿ ಗಲಭೆ ನಡೆದ ಸ್ಥಳದಲ್ಲಿ ಬೆಳಿಗ್ಗೆ 9ರಿಂದ 9:30ರ ವೇಳೆ ಇತರ ಆರೋಪಿಗಳೊಂದಿಗೆ ಇದ್ದರು ಮತ್ತು ಇತರರಿಗೆ ‘ ಯೋಜಿಸಿದ ಕೆಲಸ ಮಾಡಿ ಮುಗಿಸುವಂತೆ ಸೂಚನೆ ನೀಡುತ್ತಿದ್ದರು’ ಎಂದು ಈ ಮೊದಲು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದ ಹಬೀಬ್ ಮಿಯಾ ಮತ್ತು ಉಮ್ರಾವೊ ಬಾನು ತಿಳಿಸಿದ್ದರು.

 ಅಲ್ಲದೆ ಸುಮಾರು 8 ಸಾಕ್ಷಿಗಳು ಕೂಡಾ ತಾವು ಸಚಿವೆಯನ್ನು ಗಲಭೆ ನಡೆದ ಸ್ಥಳದಲ್ಲಿ ಬೆಳಿಗ್ಗೆ 9ರಿಂದ 9:30ರ ವೇಳೆ ಕಂಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಈಗ ಬಿಜೆಪಿ ಅಧ್ಯಕ್ಷರ ಹೇಳಿಕೆ ಕೂಡಾ ಈ ಹೇಳಿಕೆಗಳಿಗೆ ಪೂರಕವಾಗಿಯೇ ಇದೆ ಎಂದು ಸಂತ್ರಸ್ತರ ಪರ ವಕೀಲರು ವಾದ ಮಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News