ಫುಟ್ಬಾಲ್ ತಂಡದ ಧ್ವಜವನ್ನು ಹೊದಿಸಿದ್ದ ಸೋಮನಾಥ ಚಟರ್ಜಿ ಮೃತದೇಹ!

Update: 2018-08-14 14:46 GMT

ಹೊಸದಿಲ್ಲಿ, ಆ.14: ಗಣ್ಯವ್ಯಕ್ತಿಗಳು ಮೃತಪಟ್ಟಾಗ ಅವರ ದೇಹವನ್ನು ರಾಷ್ಟ್ರಧ್ವಜ ಅಥವಾ ಅವರು ಸದಸ್ಯರಾಗಿದ್ದ ರಾಜಕೀಯ ಪಕ್ಷದ ಧ್ವಜದಿಂದ ಹೊದಿಸುವುದು ಸಾಮಾನ್ಯ ವಿಷಯ. ಆದರೆ ಫುಟ್ಬಾಲ್ ತಂಡವೊಂದರ ಧ್ವಜವನ್ನು ಮೃತದೇಹಕ್ಕೆ ಹೊದಿಸುವುದು ಬಹಳ ಅಪರೂಪವೇ ಸರಿ. ಸೋಮವಾರ ಮೃತಪಟ್ಟ ಹಿರಿಯ ರಾಜಕಾರಣಿ ಮತ್ತು ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿಯವರ ಮೃತದೇಹವನ್ನು ಅವರ ಇಷ್ಟದ ಫುಟ್ಬಾಲ್ ಕ್ಲಬ್‌ನ ಧ್ವಜದಿಂದ ಹೊದಿಸಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.

ಹತ್ತು ಬಾರಿ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿರುವ ಚಟರ್ಜಿ 1968ರಲ್ಲಿ ಸಿಪಿ(ಎಂ) ಪಕ್ಷವನ್ನು ಸೇರಿ 2008ರವರೆಗೆ ಅದರ ಕೇಂದ್ರ ಸಮಿತಿಯ ಸದಸ್ಯರಾಗಿದ್ದರು. ಆದರೆ 2008ರಲ್ಲಿ ಯುಪಿಎ-1 ಸರಕಾರಕ್ಕೆ ಸಿಪಿ(ಎಂ) ಬೆಂಬಲ ವಾಪಸ್ ಪಡೆದ ಸಂದರ್ಭದಲ್ಲಿ ತಮ್ಮ ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಲು ಚಟರ್ಜಿ ನಿರಾಕರಿಸಿದ ಕಾರಣ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಸದ್ಯ ಚಟರ್ಜಿ ವಿಧಿವಶರಾಗಿದ್ದು ಅವರ ಮೃತದೇಹವನ್ನು ಸಿಪಿ(ಎಂ) ಪಕ್ಷದ ದ್ವಜದಿಂದ ಹೊದಿಸಲು ನಿರಾಕರಿಸಲಾಯಿತು. ಈ ಕುರಿತು ಮಾತನಾಡಿರುವ ಚಟರ್ಜಿಯವರ ಪುತ್ರಿ ಅನುಶೀಲಾ, ಪಕ್ಷದಿಂದ ಉಚ್ಚಾಟನೆಗೊಂಡ ನಂತರ ನಮ್ಮ ತಂದೆ ಅನುಭವಿಸಿದ ನೋವು ಮತ್ತು ದುಃಖವನ್ನು ನಾವು ಕಂಡಿದ್ದೇವೆ. ನಾನು ಹಲವು ಬಾರಿ ನಮ್ಮ ತಂದೆ ಅವರ ಪಕ್ಷದ ವಿರುದ್ಧ ಮಾತನಾಡುವಂತೆ ಮಾಡಲು ಪ್ರಯತ್ನಿಸಿದ್ದೆ. ಆದರೆ ಅವರು ಎಂದೂ ಪಕ್ಷದ ವಿರುದ್ಧ ಹೇಳಿಕೆಯನ್ನು ನೀಡಲಿಲ್ಲ. ನಮಗೆ ಪಕ್ಷದಿಂದ ಯಾವುದೇ ನೆರವು ಬೇಡ. ಅವರು ಈಗಾಗಲೇ ನಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಚಟರ್ಜಿಯವರಿಗೆ ಅಂತಿಮ ನಮನ ಸಲ್ಲಿಸುವ ಸಲುವಾಗಿ ಅವರ ಮೃತದೇಹವನ್ನು ಕೇಂದ್ರ ಕೊಲ್ಕತ್ತಾದ ಅಲಿಮುದ್ದೀನ್ ರಸ್ತೆಯಲ್ಲಿರುವ ಸಿಪಿ(ಎಂ) ಪಕ್ಷದ ಮುಖ್ಯ ಕಚೇರಿಗೆ ಕೊಂಡೊಯ್ಯಬೇಕು ಎಂಬ ಮನವಿಯನ್ನೂ ಅವರ ಕುಟುಂಬ ತಳ್ಳಿಹಾಕಿದೆ. ಸಿಪಿ(ಎಂ)ನ ಕೆಂಪು ಬಾವುಟದ ಬದಲಾಗಿ ಚಟರ್ಜಿ ಅರ್ಧ ಶತಕ ಸದಸ್ಯರಾಗಿದ್ದ ಮೋಹನ್ ಬಗನ್ ಫುಟ್ಬಾಲ್ ತಂಡದ ಕೆಂಪು ಮತ್ತು ಹಸಿರು ಬಣ್ಣದ ಧ್ವಜವನ್ನು ಅವರ ಮೃತದೇಹದ ಮೇಲೆ ಹಾಕಲಾಗಿತ್ತು. ಚಟರ್ಜಿಯವರು ಮೋಹನ್ ಬಗನ್ ತಂಡದ ಕಟ್ಟಾ ಅಭಿಮಾನಿ ಹಾಗೂ ಸದಸ್ಯರಾಗಿದ್ದರು. ಫುಟ್ಬಾಲ್ ತಂಡ ಕೂಡಾ ಚಟರ್ಜಿಗೆ ಶ್ರದ್ಧಾಂಜಲಿ ಸಲ್ಲಿಸಿ ಫಲಕಗಳನ್ನು ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News