ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಯೋಧರು

Update: 2018-08-14 14:44 GMT

ಹೊಸದಿಲ್ಲಿ, ಆ. 14: ಸೇನಾ ಪಡೆ ವಿಶೇಷ ಅಧಿಕಾರ ಕಾಯ್ದೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿರುವುದಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ದಾಖಲಿಸಲಾದ ಪ್ರಥಮ ಮಾಹಿತಿ ವರದಿ ಪ್ರಶ್ನಿಸಿ ಸುಮಾರು 300ಕ್ಕೂ ಅಧಿಕ ಸೇನಾ ಸಿಬ್ಬಂದಿ ಸಲ್ಲಿಸಿದ ಮನವಿಯನ್ನು ಆಗಸ್ಟ್ 20ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿಕೊಂಡಿದೆ.

 ಎಫ್‌ಐಆರ್ ದಾಖಲಿಸುವುದು, ಪೊಲೀಸ್, ಸಿಬಿಐ ತನಿಖೆ ನಡೆಸುವುದರಿಂದ ಯೋಧರಿಗೆ ಹಿನ್ನಡೆ ಉಂಟಾಗಿ ಭಯೋತ್ಪಾದನೆ ಹಾಗೂ ಬಂಡಾಯ ಇರುವ ಪ್ರದೇಶಗಳಲ್ಲಿ ಕಾರ್ಯಾಚರಣೆ ದುರ್ಬಲವಾಗುತ್ತದೆ. ಆದುದರಿಂದ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಯೋಧರ ಪರವಾಗಿ ಮಹಿಳಾ ನ್ಯಾಯವಾದಿ ಐಶ್ವರ್ಯಾ ತಿಳಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಮನವಿ ವಿಚಾರಣೆಗೆ ಒಪ್ಪಿಕೊಂಡಿದೆ. ಇಂತಹ ವಿಚಾರಣೆಗಳು ಸೇನಾ ಪಡೆ ಹಾಗೂ ಅರೆ ಸೇನಾ ಪಡೆಯ ನೈತಿಕತೆ ಕುಸಿಯುವಂತೆ ಮಾಡುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ. ಮಣಿಪುರದಂತಹ ರಾಜ್ಯಗಳಲ್ಲಿ ನಕಲಿ ಎನ್‌ಕೌಂಟರ್‌ಗಳು ಹೆಚ್ಚುತ್ತಿರುವ ಆರೋಪದಲ್ಲಿ ಸೇನಾ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವಂತೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News