ಜಾರ್ಖಂಡ್:ಮಿಷನರೀಸ್ ಆಫ್ ಚ್ಯಾರಿಟಿಯ ಏಳು ಬಾಲಗೃಹಗಳ ಪರವಾನಿಗೆಗಳಿಗೆ ಕುತ್ತು

Update: 2018-08-14 15:29 GMT

ರಾಂಚಿ,ಆ.14: ಮಿಷನರೀಸ್ ಆಫ್ ಚ್ಯಾರಿಟಿ ರಾಂಚಿಯಲ್ಲಿ ನಡೆಸುತ್ತಿರುವ ಏಳು ಬಾಲಗೃಹಗಳ ಪರವಾನಿಗೆಗಳನ್ನು ಜಾರ್ಖಂಡ್ ಸರಕಾರವು ರದ್ದುಗೊಳಿಸಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೋರ್ವರು ಮಂಗಳವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.

ಈ ಏಳು ಬಾಲಗೃಹಗಳ ಪರವಾನಿಗೆಗಳನ್ನು ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗಳು ಮಾಡಿರುವ ಶಿಫಾರಸನ್ನು ಇಲಾಖೆಯು ಒಪ್ಪಿಕೊಂಡಿದೆ ಎಂದ ಅವರು, ಸ್ವಾತಂತ್ರೋತ್ಸವ ದಿನದ ಬಳಿಕ ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸುವ ಸಾಧ್ಯತೆಯಿದೆ ಎಂದರು.

ಇನ್ನೆರಡು ಸಂಸ್ಥೆಗಳಾದ ಆಶಾ ಸಂಸ್ಥಾನ ಮತ್ತು ಕಿಶೋರಿ ನಿಕೇತನ ತಮ್ಮ ನಿರ್ವಹಣೆಯನ್ನು ಸುಧಾರಿಸಕೊಳ್ಳಲು ಮೂರು ತಿಂಗಳ ಗಡುವು ನೀಡಲಾಗಿದೆ.

ಕಳೆದ ಜೂನ್‌ನಲ್ಲಿ ನಾಲ್ಕು ಶಿಶುಗಳ ಮಾರಾಟ ಕುರಿತಂತೆ ವಿವಾದವು ಸೃಷ್ಟಿಯಾದ ಬಳಿಕ ಮಿಷನರೀಸ್ ಆಫ್ ಚ್ಯಾರಿಟಿಯ ಕುರಿತು ತನಿಖೆ ನಡೆದಿತ್ತು. ಸಂತಾನರಹಿತ ದಂಪತಿಗಳಿಗೆ ನವಜಾತ ಶಿಶುಗಳನ್ನು ಮಾರಾಟ ಮಾಡಿದ್ದ ಆರೋಪದಲ್ಲಿ ಚ್ಯಾರಿಟಿಯ ಓರ್ವ ನನ್ ಮತ್ತು ಓರ್ವ ಉದ್ಯೋಗಿಯನ್ನು ಬಂಧಿಸಲಾಗಿತ್ತು.

 ಎನ್‌ಜಿಒಗಳ ತನಿಖೆಯ ನೆಪದಲ್ಲಿ ಸರಕಾರವು ಮಿಷನರೀಸ್ ವಿರುದ್ಧ ದಮನಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ರಾಂಚಿಯ ಆರ್ಚ್ ಬಿಷಪ್ ಫೆಲ್ಸಿಕ್ ಟೊಪ್ಪೊ ಅವರು ಎರಡು ದಿನಗಳ ಹಿಂದೆ ಆರೋಪಿಸಿದ್ದರು. ಸಿಐಡಿ ಪೊಲೀಸರು 88 ಎನ್‌ಜಿಒಗಳಿಗೆ ಆರ್ಥಿಕ ನೆರವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಟೊಪ್ಪೊ ಅವರ ಆರೋಪವನ್ನು ರಾಜ್ಯ ಬಿಜೆಪಿಯು ತಿರಸ್ಕರಿಸಿದೆ. ಕೇಂದ್ರ ಗೃಹ ಸಚಿವಾಲಯದ ನಿರ್ದೇಶದ ಮೇರೆಗೆ ತನಿಖೆಯು ನಡೆಯುತ್ತಿದ್ದು,ಮಿಷನರೀಸ್ ಇದಕ್ಕೆ ಸಹಕರಿಸಬೇಕು ಎಂದು ಜಾರ್ಖಂಡ್ ಬಿಜೆಪಿ ವಕ್ತಾರ ಪ್ರತುಲ್ ಸಹದೆರೊ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News