ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿದ್ದ ವ್ಯಕ್ತಿಗೆ ಮರಣದಂಡನೆ
Update: 2018-08-14 21:02 IST
ದಾತಿಯಾ(ಮ.ಪ್ರ),ಆ.14: ಈ ವರ್ಷದ ಮಾ.2ರಂದು ಇಲ್ಲಿಯ ಬಿಜಾಸೇನ್ ಮೊಹಲ್ಲಾದಲ್ಲಿ ಹೋಳಿ ಹಬ್ಬಕ್ಕೆ ಬಣ್ಣ ಕೊಡಿಸುವ ಆಮಿಷವೊಡ್ಡಿ 13ರ ಹರೆಯದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿದ್ದ ನಂದಕಿಶೋರ(20) ಎಂಬಾತನಿಗೆ ಇಲ್ಲಿಯ ವಿಶೇಷ ನ್ಯಾಯಾಲಯವು ಮರಣ ದಂಡನೆಯನ್ನು ವಿಧಿಸಿದೆ. 15ರ ಹರೆಯದ ಸಹಆರೋಪಿಯ ಪ್ರಕರಣವನ್ನು ಬಾಲ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.
ಇವರಿಬ್ಬರೂ ಬಾಲಕನನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಆತನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಂದು,ಬಳಿಕ ಶವವನ್ನು ದಾತಿಯಾ ನಗರದ ಹೊರವಲಯದಲ್ಲಿಯ ನೀರಾವರಿ ಕಾಲುವೆಗೆ ಎಸೆದಿದ್ದರು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.
ಬಾಲಕನ ಹತ್ಯೆಯ ಬಳಿಕ ಆತನ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದ ಆರೋಪಿಗಳು ಒಂದು ಲಕ್ಷ ರೂ.ಒತ್ತೆಹಣ ನೀಡದಿದ್ದರೆ ಬಾಲಕನನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದರು. ಕುಟುಂಬದ ದೂರಿನ ಮೇರೆಗೆ ಘಟನೆ ನಡೆದ ಎರಡು ದಿನಗಳ ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.