ಪ್ರಧಾನಿ ಮೋದಿ ಸ್ವಾತಂತ್ರ ದಿನದ ಭಾಷಣ ಗೂಗಲ್, ಯೂಟ್ಯೂಬ್‌ನಲ್ಲಿ ನೇರಪ್ರಸಾರ

Update: 2018-08-14 15:36 GMT

ಹೊಸದಿಲ್ಲಿ, ಆ.14: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಾತಂತ್ರ ದಿನದಂದು ದೇಶವನ್ನು ಉದ್ದೇಶಿಸಿ ಕೆಂಪುಕೋಟೆಯಲ್ಲಿ ಮಾಡುವ ಭಾಷಣ ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿ ನೇರಪ್ರಸಾರವಾಗಲಿದೆ. ಪ್ರಧಾನಿಯಾಗಿ ಈ ಅವಧಿಯಲ್ಲಿ ತಮ್ಮ ಅಂತಿಮ ಸ್ವಾತಂತ್ರ ದಿನದ ಭಾಷಣ ಮಾಡಲಿರುವ ಮೋದಿಯವರ ಭಾಷಣವನ್ನು ಆದಷ್ಟು ಹೆಚ್ಚು ಜನರು ವೀಕ್ಷಿಸಬೇಕು ಎಂಬ ಉದ್ದೇಶದಿಂದ ಪ್ರಸಾರ ಭಾರತಿ, ಗೂಗಲ್ ಮತ್ತು ಯೂಟ್ಯೂಬ್ ಜೊತೆ ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಲು ಒಪ್ಪಂದ ಮಾಡಿಕೊಂಡಿದೆ. ಕಳೆದ ಜನವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪದಗ್ರಹಣ ಭಾಷಣವನ್ನು ಮೊದಲ ಬಾರಿ ಗೂಗಲ್ ನೇರ ಪ್ರಸಾರ ಮಾಡಿತ್ತು. ನಮ್ಮ ಡಿಜಿಟಲ್ ಉಪಸ್ಥಿತಿಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಸ್ವಾತಂತ್ರ ದಿನದ ಕಾರ್ಯಕ್ರಮವನ್ನು ಆನ್‌ಲೈನ್ ನೇರ ಪ್ರಸಾರ ಮಾಡಲು ಗೂಗಲ್ ಮತ್ತು ಯೂಟ್ಯೂಬ್ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಪ್ರಸಾರ ಭಾರತಿಯ ಸಿಇಒ ಶಶಿಶೇಖರ ವೆಂಪಟಿ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ. ಪ್ರತಿ ವರ್ಷ 1.5ರಿಂದ 2 ಮಿಲಿಯನ್ ಜನರು ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ. ಇದೇ ಮೊದಲ ಬಾರಿ ದೂರದರ್ಶನದ ನಿರೂಪಕರು ಸ್ಟುಡಿಯೊ ಒಳಗೆ ಕುಳಿತು ಸ್ವಾತಂತ್ರ ದಿನಾಚರಣೆಯ ಕಾರ್ಯಕ್ರಮದ ವರದಿ ನೀಡುವ ಬದಲು ಕೆಂಪುಕೋಟೆಯ ಬಳಿ ಉಪಸ್ಥಿತರಿದ್ದು ಅಲ್ಲಿಂದಲೇ ಕಾರ್ಯಕ್ರಮದ ಮಾಹಿತಿ ನೀಡಲಿದ್ದಾರೆ ಎಂದು ವೆಂಪಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News