ಅಸ್ಸಾಂ ನಾಗರಿಕ ಪಟ್ಟಿಯಿಂದ ಕೈಬಿಟ್ಟವರ ಸಂಖ್ಯೆ 20ಲಕ್ಷಕ್ಕೆ ಇಳಿಯುವ ಸಾಧ್ಯತೆ

Update: 2018-08-14 15:39 GMT

ಹೊಸದಿಲ್ಲಿ, ಆ.14: ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವ ಅಸ್ಸಾಂ ನಾಗರಿಕ ನೋಂದಣಿ ಪಟ್ಟಿಯಿಂದ ಕೈಬಿಡಲಾಗಿರುವ ಜನರ ಸಂಖ್ಯೆ ಅರ್ಧಕ್ಕರ್ಧ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ. ನಾಗರಿಕ ನೋಂದಣಿಯ ಅಂತಿಮ ಪಟ್ಟಿಯಲ್ಲಿ ಈವರೆಗೆ ಕೈಬಿಡಲಾಗಿರುವ ಜನರ ಸಂಖ್ಯೆ 40 ಲಕ್ಷದಿಂದ 20 ಲಕ್ಷಕ್ಕೆ ಇಳಿಯುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜೊತೆಗೆ ರಾಷ್ಟ್ರೀಯ ನಾಗರಿಕ ನೋಂದಣಿಯಲ್ಲಿ ಹೆಸರು ಸೇರಿಸಲು ಹೆಚ್ಚಿನ ದಾಖಲೆಗಳನ್ನು ಒದಗಿಸಲು ನೀಡಿರುವ ಕಾಲಾವಕಾಶವನ್ನು ವಿಸ್ತರಿಸಲು ಗೃಹ ಇಲಾಖೆ ಮುಂದಾಗಿದೆ ಎಂದು ವರದಿ ತಿಳಿಸಿದೆ.

ಈ ಹಿಂದೆ ಗೃಹ ಸಚಿವಾಲಯವು, ಯಾವುದೇ ರೀತಿಯ ಆಕ್ಷೇಪಣೆಗಳನ್ನು ಸಲ್ಲಿಸಲು ಹಾಗೂ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಆ.30ರಿಂದ ಸೆ.28ರ ವರೆಗಿನ ಕಾಲಾವಕಾಶವನ್ನು ನೀಡಿತ್ತು. ಇದೀಗ ನಿಗದಿಪಡಿಸಲಾಗಿರುವ ಹೆಚ್ಚುವರಿ ಸಮಯದ ಪತ್ರವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಅನುಮತಿಗಾಗಿ ಸಲ್ಲಿಸಲಾಗಿದೆ. ಇದಕ್ಕೆ ಸಂಬಂಧಿಸಿ ನ್ಯಾಯಾಲಯ ಆ.16ರಂದು ವಿಚಾರಣೆ ನಡೆಸಲಿದೆ. ಈ ಕಾಲಾವಕಾಶವನ್ನು ಡಿಸೆಂಬರ್ 2018ರ ವರೆಗೆ ವಿಸ್ತರಿಸುವಂತೆ ವಿವಿಧ ರಾಜಕೀಯ ಪಕ್ಷಗಳು ಮನವಿ ಮಾಡಿವೆ ಎಂದು ವರದಿ ತಿಳಿಸಿದೆ. ಜನರು ಹೇಗೆ ಹೊಸದಾಗಿ ದಾಖಲೆಗಳನ್ನು ಸಲ್ಲಿಸಬಹುದು ಮತ್ತು ಯಾವ ರೀತಿ ತಮ್ಮ ಪೌರತ್ವವನ್ನು ಸಾಬೀತುಪಡಿಸಬಹುದು ಎಂಬುದರ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಸರಕಾರಕ್ಕೆ ಇನ್ನಷ್ಟು ಹೆಚ್ಚಿನ ಸಮಯ ಬೇಕಾಗಿದೆ. ಜೊತೆಗೆ ಅನೇಕ ಜನರ ವಿಷಯದಲ್ಲಿ ಹೊರರಾಜ್ಯಗಳಿಂದ ಪ್ರತಿಕ್ರಿಯೆಯನ್ನು ಪಡೆಯುವ ಅಗತ್ಯವಿದೆ. ಅದಕ್ಕೂ ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೋಂದಣಿಯ ಅಂತಿಮ ಕರಡಿನಲ್ಲಿ ಸುಮಾರು 2.39 ಕೋಟಿ ಹೆಸರುಗಳಿರುವ ನಿರೀಕ್ಷೆಯಿದೆ. ಆದರೆ ಕೆಲವರು ನಕಲಿ ದಾಖಲೆಗಳನ್ನು ನೀಡಿ ಈ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂಬ ಅನುಮಾನವೂ ಇದೆ. ಸರಕಾರ ಎದುರಿಸುತ್ತಿರುವ ಮತ್ತೊಂದು ಸವಾಲೆಂದರೆ ಸಂಶಯಾಸ್ಪದ ಮತದಾರರು. ಚುನಾವಣಾ ಆಯೋಗವು ರಾಜ್ಯದಲ್ಲಿ 1.8 ಲಕ್ಷ ಸಂಶಯಾಸ್ಪದ ಮತದಾರರಿದ್ದಾರೆ ಎಂದು 1996ರಲ್ಲಿ ತಿಳಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News