ಲೋಕಸಭಾ ಚುನಾವಣೆಯೊಂದಿಗೇ 11 ರಾಜ್ಯಗಳ ಚುನಾವಣೆ ನಡೆಸಬೇಕಿದ್ದರೆ ಎರಡು ತಿಂಗಳಲ್ಲಿ ವಿವಿಪ್ಯಾಟ್ ಖರೀದಿಗೆ ಆದೇಶಿಸಿ

Update: 2018-08-14 16:28 GMT

ಹೊಸದಿಲ್ಲಿ,ಆ.14: 2019ರ ಲೋಕಸಭಾ ಚುನಾವಣೆಯೊಂದಿಗೆ 11 ರಾಜ್ಯಗಳ ಚುನಾವಣೆಗಳನ್ನೂ ನಡೆಸಲು ಸರಕಾರವು ಬಯಸಿದ್ದರೆ ಹೆಚ್ಚಿನ ವಿವಿಪ್ಯಾಟ್ ಯಂತ್ರಗಳನ್ನು ಖರೀದಿಸುವ ಬಗ್ಗೆ ನಿರ್ಧಾರವನ್ನು ಒಂದೆರಡು ತಿಂಗಳುಗಳಲ್ಲಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಅವರು ಮಂಗಳವಾರ ಇಲ್ಲಿ ತಿಳಿಸಿದರು. ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಲು ಸಾಕಷ್ಟು ಯಂತ್ರಗಳು ಆಯೋಗದ ಬಳಿಯಿಲ್ಲ ಎಂದರು.

ಲೋಕಸಭೆ ಮತ್ತು 11 ರಾಜ್ಯಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಪ್ರಸ್ತಾವವನ್ನು ಬಿಜೆಪಿ ಸೋಮವಾರ ಚುನಾವಣಾ ಆಯೋಗದ ಮುಂದಿರಿಸಿತ್ತು.

ಆಯೋಗದ ಮಾಜಿ ಕಾನೂನು ಸಲಹೆಗಾರ ಎಸ್.ಕೆ.ಮೆಂದಿರಟ್ಟ ಅವರೂ ಆಂಗ್ಲ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಆಯೋಗದ ಬಳಿ ಈಗಿರುವ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳಿಂದ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಸಾಧ್ಯವಿಲ್ಲ ಮತ್ತು ಅಗತ್ಯ ಸಂಖ್ಯೆಯ ಯಂತ್ರಗಳನ್ನು ಖರೀದಿಸಲು ಆಯೋಗಕ್ಕೆ ಕನಿಷ್ಠ ಮೂರು ವರ್ಷಗಳು ಬೇಕಾಗುತ್ತವೆ ಎಂದು ಅವರು ಹೇಳಿದ್ದರು.

ಮಹಾರಾಷ್ಟ್ರ,ಹರ್ಯಾಣ ಮತ್ತು ಜಾರ್ಖಂಡ್‌ಗಳಲ್ಲಿ ಮುಂದಿನ ವರ್ಷದ ಅಂತ್ಯದಲ್ಲಿ ಮತ್ತು ಬಿಹಾರದಲ್ಲಿ 2020ರಲ್ಲಿ ಚುನಾವಣೆಗಳು ನಡೆಯಬೇಕಿವೆ. ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಪಕ್ಷದ ಕರೆಯನ್ನು ಜೆಡಿಯು ಬೆಂಬಲಿಸಿರುವುದರಿಂದ ತನ್ನ ಪ್ರಸ್ತಾವವನ್ನು ಒಪ್ಪಿಕೊಳ್ಳಲು ರಾಜ್ಯಕ್ಕೆ ಕಷ್ಟವಾಗುವುದಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ.

ಈ ವರ್ಷ ನಡೆಯಬೇಕಿರುವ ಮಧ್ಯಪ್ರದೇಶ,ಛತ್ತೀಸ್‌ಗಡ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಗಳನ್ನು 2019ರ ಲೋಕಸಭಾ ಚುನಾವಣೆಯೊಂದಿಗೆ ನಡೆಯುವ ಒಡಿಶಾ,ತೆಲಂಗಾಣ,ಆಂಧ್ರಪ್ರದೇಶ,ಮಿಝೋರಾಂ ಚುನಾವಣೆ ಗಳೊಂದಿಗೆ ನಡೆಸಬಹುದಾಗಿದೆ. ಈ ಬಗ್ಗೆ ಚರ್ಚಿಸಲು ಸರಕಾರವು ಶೀಘ್ರವೇ ಸರ್ವಪಕ್ಷ ಸಭೆಯನ್ನು ಕರೆಯಲಿದೆ.

ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಪರಿಕಲ್ಪನೆಗೆ ಪ್ರಧಾನಿ ನರೇಂದ್ರ ಮೋದಿಯವರು ಪದೇ ಪದೇ ಬೆಂಬಲ ವ್ಯಕ್ತಪಡಿಸಿರುವುದರಿಂದ ಲೋಕಸಭೆಯೊಂದಿಗೆ ಸಾಧ್ಯವಿರುವಷ್ಟು ರಾಜ್ಯ ವಿಧಾನಸಭೆಗಳಿಗೆ ಚುನಾವಣೆಯನ್ನು ನಡೆಸಿದರೆ ತನ್ನ ಪಾಲಿಗೆ ಧನಾತ್ಮಕವಾಗುತ್ತದೆ ಎನ್ನುವುದು ಬಿಜೆಪಿಯೊಳಗಿನ ಅಭಿಪ್ರಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News