ನಮ್ಮನ್ನೆಲ್ಲ ಕತ್ತಲೆಯಲ್ಲಿಟ್ಟಿದ್ದ ಆಕಾರ್ಟ್ ರಾಮಸ್ವಾಮಿ

Update: 2018-08-15 07:03 GMT

ಮೈಸೂರು: ಸ್ವಾತಂತ್ರ ಪದದ ಅರ್ಥ ಗೊತ್ತಿರದಿದ್ದರೂ ಅದೇನೋ ಉತ್ಸಾಹ ಮೂಡಿಸುತ್ತಿತ್ತು. ಆದರೆ, ಸ್ವಾತಂತ್ರ ಚಳವಳಿಯಲ್ಲಿ ನೇರವಾಗಿ ಪಾಲ್ಗೊಳ್ಳಲು ಆಗಲಿಲ್ಲ. ಅದರ ಮುಂದುವರಿದ ಭಾಗವಾಗಿ ನಡೆದ ಮೈಸೂರು ಸ್ವಾತಂತ್ರ ಚಳವಳಿಯಲ್ಲಿ ಪಾಲ್ಗೊಂಡಿದ್ದು ನನ್ನ ದೇಶಭಕ್ತಿ ಪ್ರದರ್ಶನಕ್ಕೆ ಅವಕಾಶ ನೀಡಿತು ಎಂದು ಸ್ವಾತಂತ್ರ ಹೋರಾಟಗಾರ ಕೆ.ಎಸ್.ಶಿವಣ್ಣ ತಮ್ಮ ಅನುಭವವನ್ನು ವಾರ್ತಾಭಾರತಿಯೊಂದಿಗೆ ಹಂಚಿಕೊಂಡಿದ್ದು ಹೀಗೆ.

‘ಆ ವೇಳೆ ನಾನಿನ್ನೂ ಸಣ್ಣಹುಡುಗ. ಸ್ವಾತಂತ್ರ ಚಳವಳಿಯ ಬಗ್ಗೆ ಆಗಷ್ಟೇ ಅರಿವಾಗಿತ್ತು. ಆದರೂ ಚಳವಳಿಗಳಲ್ಲಿ ಭಾಗವಹಿಸಿ ರಲಿಲ್ಲ. ಆಗ ನಮ್ಮ ಹಿರಿಯರಾದ ಎಚ್.ಸಿ.ದಾಸಪ್ಪ, ಎಚ್.ಎಂ.ಚನ್ನಬಸಪ್ಪ, ಅಗರಂ ರಂಗಯ್ಯ, ಎಂ.ಎನ್.ಜೋಯಿಸ್, ತಗಡೂರು ರಾಮಚಂದ್ರರಾಯರು, ಚಂಗಲ್‌ರಾಯರೆಡ್ಡಿ, ಸೇರಿದಂತೆ ಅನೇಕರು ಹಳ್ಳಿ ಹಳ್ಳಿಗಳಿಗೆ ತೆರಳಿ ಸ್ವಾತಂತ್ರ ಚಳವಳಿಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದರು.

‘ನಮಗೆ ಸ್ವಾತಂತ್ರ ಬಂತು. ಆದರೆ ಮೈಸೂರು ಪ್ರಾಂತಕ್ಕೆ ಮಾತ್ರ ಸ್ವಾತಂತ್ರ ಸಿಕ್ಕಿರಲಿಲ್ಲ. ಇಲ್ಲಿನ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ನಮಗೆ ಸ್ವಾತಂತ್ರ ನೀಡಿರಲಿಲ್ಲ. ನಮಗೆ ಸ್ವಾತಂತ್ರ ನೀಡಿದರೆ ತಮ್ಮ ಬೇಳೆ ಏನೂ ಬೇಯುವುದಿಲ್ಲ ಎಂದು ಅರಿತಿದ್ದ ಆಸ್ಥಾನದ ದಿವಾನರಾಗಿದ್ದ ತಂಬುಚೆಡ್ಡಿ ಪೆರುಮಾಳ್ ಚೆಟ್ಟಿ, ಆಕಾರ್ಟ್ ರಾಮಸ್ವಾಮಿ ಮಹಾರಾಜರ ತಲೆ ಕೆಡಿಸಿ ನಮ್ಮನ್ನೆಲ್ಲ ಕತ್ತಲೆಯಲ್ಲೇ ಇಟ್ಟಿದ್ದರು’ ಎಂದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಚ್.ಎಂ.ಚನ್ನಬಸಪ್ಪ, ಎಚ್.ಸಿ.ದಾಸಪ್ಪ ಮೊದಲಾದವರೆಲ್ಲಾ ಜವಾಬ್ದಾರಿಯುತ ಸರಕಾರ ಆಗಬೇಕು ಎಂದು ಹೋರಾಟ ಆರಂಭಿಸಿ ‘ಮೈಸೂರು ಚಲೋ’ಗೆ ಕರೆಕೊಟ್ಟರು. 1947 ಅಕ್ಟೋಬರ್ 27ರ ವೇಳೆ ನಾನಿನ್ನೂ ವಿದ್ಯಾರ್ಥಿ (ಸ್ವಾತಂತ್ರ ಚಳವಳಿಯಲ್ಲಿ ಪಾಲ್ಗೊಂಡ ಮೊದಲ ವಿದ್ಯಾರ್ಥಿ) ಚಾಮರಾಜ ನಗರದಿಂದ ಮೈಸೂರುವರೆಗೆ ಪಾದಯಾತ್ರೆ ಕೈಗೊಂಡು ಸತ್ಯಾಗ್ರಹ ಮಾಡಿದೆವು. ಮೈಸೂರು ಅರಮನೆಯನ್ನು ಮುತ್ತಿಗೆ ಹಾಕಿದೆವು. ಆಗ ನಮ್ಮನ್ನು ಬಂಧಿಸಿ ಇಲ್ಲಿನ ಸೆಂಟ್ರಲ್ ಜೈಲಿನಲ್ಲಿ ಒಂದು ದಿನ ಇಟ್ಟು ನಂತರ ಬಿಡುಗಡೆ ಮಾಡಿದರು ಎಂದು ತಮ್ಮ ಚಳವಳಿಯ ಹಿನ್ನೆಲೆಯನ್ನು ಮೆಲುಕು ಹಾಕಿದರು.

  ಸರಕಾರ ನಮಗೆ ಗೌರವಧನ ನೀಡುತ್ತಿದ್ದು, ಹಿಂದೆ ಬಹಳ ಕಡಿಮೆಯ ಗೌರವಧನ ಬರುತ್ತಿತ್ತು, ನಂತರ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸ್ವಲ್ಪ ಹೆಚ್ಚಿ ಸಿದರು. ಮುಖ್ಯಮಂತ್ರಿಯಾದ ಮೇಲೆ ಕಳೆದ ವರ್ಷ ಎಪ್ರಿಲ್, ಮೇ ತಿಂಗಳಿನಿಂದ 10 ಸಾವಿರ ರೂ.ಗೆ ಹೆಚ್ಚಿ ಸಿದ್ದಾರೆ ಎಂದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News