ಹರಿಜನ ವಿದ್ಯಾರ್ಥಿ ನಿಲಯಕ್ಕೆ ಮಹಾತ್ಮಾ ಅಡಿಗಲ್ಲು

Update: 2018-08-15 08:05 GMT

ದಾವಣಗೆರೆ: ರಾಷ್ಟಪಿತ ಮಹಾತ್ಮಾ ಗಾಂಧೀಜಿ ಅವರು ದೇಶಾದ್ಯಂತ ಸ್ವಾತಂತ್ರ ಸಂಗ್ರಾಮದ ಚಳವಳಿಯಲ್ಲಿ ಭಾಗ ವಹಿಸಿದ್ದರು. ದಾವಣಗೆರೆ ಮತ್ತು ಚಿತ್ರದುರ್ಗಗಳಲ್ಲಿ ಹೋರಾಟದ ತೀವ್ರತೆ ಮನಗಂಡ ಅವರು ದಾವಣಗೆರೆಗೆ ಭೇಟಿ ನೀಡುವ ನಿರ್ಧಾರ ಮಾಡಿದರು. ಗಾಂಧೀಜಿ ಅವರು 1934 ಮಾರ್ಚ್ 2ರಂದು ದಾವಣಗೆರೆ ಆಗಮಿಸಿದರು. ಈ ವೇಳೆ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದರು. ದಾವಣಗೆರೆ ಉಳಿಯುವಂತೆ ಜನರ ಒತ್ತಡ ಹೆಚ್ಚಾದಾಗ ಷರತ್ತಿನ ಮೇಲೆ ಉಳಿಯಲು ಒಪ್ಪಿದರು. ನಗರದಲ್ಲಿ ಹರಿಜನ ವಿದ್ಯಾರ್ಥಿ ನಿಲಯ ಸ್ಥಾಪನೆಯಾಗ ಬೇಕು, ಅದಕ್ಕೆ ಸ್ಥಳದಾನ ಮಾಡಬೇಕು, ಕಟ್ಟಡಕ್ಕೆ ಹಣ ಸಂಗ್ರಹಿಸ ಬೇಕು, ಇದಕ್ಕೆ ಒಪ್ಪಿದರೆ ಮಾತ್ರ ಉಳಿಯುವುದಾಗಿ ಷರತ್ತು ಹಾಕಿದರು. ಅದರಂತೆ ಆಗಿನ ಕಾಸಲ್ ಶ್ರೀನಿವಾಸ ಶೆಟ್ಟರ್ ಸೇರಿದಂತೆ ಉಳಿದ ಹೋರಾಟ ಗಾರರು ಗಾಂಧೀಜಿಯವರ ಮಾತಿಗೆ ತಕ್ಷಣ ಒಪ್ಪಿದರು. ಗಾಂಧೀಜಿ ಅವರನ್ನು ನಿವೇಶನ ಸ್ಥಳಕ್ಕೆ ಕರೆ ತಂದು ಅಂದೇ ಅಡಿಗಲ್ಲು ನೆರವೇರಿಸಿದರು. ನಂತರ ಗಾಂಧೀಜಿ ಅವರಿಗೆ ಹಾಕಿದ ಹೂವಿನ ಹಾರವನ್ನು ಹರಾಜಿಗೆ ಹಾಕಲಾಯಿತು. ಈ ಹಣವನ್ನು ವಿದ್ಯಾರ್ಥಿ ನಿಲಯ ದ ಕಟ್ಟಡ ನಿರ್ಮಾಣಕ್ಕೆ ಉಪಯೋಗಿಸಿಕೊಳ್ಳಲು ಗಾಂಧೀಜಿ ಒಪ್ಪಿದರು. ಈ ಇಡೀ ದೇಶದಲ್ಲಿ ಸ್ವಹಸ್ತದಿಂದ ಕಟ್ಟಡಗಳಿಗೆ ಅಡಿ ಗಲ್ಲು ಹಾಕಿರುವುದು ಎರಡು ಕಟ್ಟಡಗಳಿಗೆ ಮಾತ್ರ. ಅಂತಹ ಕಟ್ಟಡಗಳಲ್ಲಿ ದಾವಣಗೆರೆಯ ಹರಿಜನ ವಿದ್ಯಾರ್ಥಿ ನಿಲಯದ ಕಟ್ಟಡವೂಒಂದು ಎಂಬುದು ಹೆಗ್ಗಳಿಕೆಯ ವಿಷಯ.

ಅಂದು ಗಾಂಧೀಜಿ ಅವರು ಅಡಿಗಲ್ಲು ಹಾಕಿ ನಿರ್ಮಿಸಿದ್ದ ವಸತಿ ನಿಲಯವನ್ನು ಪ್ರಸ್ತುತ ಮಹಾತ್ಮಾ ಗಾಂಧಿ ಸ್ಮಾರಕವನ್ನಾಗಿ ಪರಿವರ್ತಿ ಸಲಾಗಿದ್ದು, ಇತ್ತೀಚೆಗೆ ಆಡಳಿತ ಕಚೇರಿಯನ್ನಾಗಿಸಿಕೊಳ್ಳಲಾಗಿದೆ. ಸ್ಮಾರಕದ ಮುಂದೆ ಗಾಂಧೀಜಿ, ಡಾ. ಅಂಬೇಡ್ಕರ್, ಬಾಬು ಜಗ ಜೀವನ್‌ರಾಂ ಅವರ ಪುತ್ಥಳಿ ನಿರ್ಮಿಸುವ ಮೂಲಕ ಗಾಂಧೀಜಿ ದೇವನಗರಿಗೆ ಬಂದ ನೆನಪುಗಳನ್ನು ಹಾಗೆಯೇ ಕಾಪಿಟ್ಟುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News