ಕಲಬುರ್ಗಿ ಹತ್ಯೆಯಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡ ಗೌರಿ ಕೊಲೆ ಪ್ರಕರಣದ ಶಂಕಿತ ಆರೋಪಿ: ವರದಿ

Update: 2018-08-16 15:08 GMT

ಹೊಸದಿಲ್ಲಿ,ಆ.16: ಪ್ರೊ.ಎಂ.ಎಂ.ಕಲಬುರ್ಗಿ ಅವರ ಹತ್ಯೆಯಲ್ಲಿ ತಾನೂ ಭಾಗಿಯಾಗಿದ್ದೆ ಎಂದು ಹಿರಿಯ ಪತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆ ಪ್ರಕರಣದಲ್ಲಿ ಬಂಧಿತ ಶಂಕಿತ ಆರೋಪಿಗಳಲ್ಲೋರ್ವ ವಿಶೇಷ ತನಿಖಾ ತಂಡ(ಸಿಟ್)ಕ್ಕೆ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾನೆ ಎಂದು ವರದಿಯಾಗಿದೆ. ಇದರೊಂದಿಗೆ ವಿಚಾರವಾದಿಗಳು ಮತ್ತು ಹಿಂದುತ್ವ ವಿರೋಧಿ ಲೇಖಕರ ಹತ್ಯೆಗಳ ಹಿಂದೆ ಒಂದೇ ಗುಂಪಿಗೆ ಸೇರಿದ ಜನರ ಕೈವಾಡವಿದೆ ಎಂಬ ಊಹಾಪೋಹಗಳು ದೃಢಪಟ್ಟಂತಾಗಿದೆ.

ಕಲಬುರ್ಗಿಯವರನ್ನು ಗುಂಡಿಕ್ಕಿ ಹತ್ಯೆಗೈಯಲು ಅವರ ಮನೆಯ ಬಳಿಗೆ ತೆರಳಿ ಬಾಗಿಲು ಬಡಿದವರಲ್ಲಿ ತಾನೂ ಒಬ್ಬನಾಗಿದ್ದೆ. ಆದರೆ ಗುಂಡನ್ನು ತಾನು ಹಾರಿಸಿರಲಿಲ್ಲ ಎಂದು ಗೌರಿ ಲಂಕೇಶ್ ಹಂತಕ ಪರಶುರಾಮ ವಾಘ್ಮೋರೆಯನ್ನು ಅವರ ನಿವಾಸಕ್ಕೆ ಕರೆದೊಯ್ದಿದ್ದ ಆರೋಪದಲ್ಲಿ ಬಂಧಿತನಾಗಿರುವ ಗಣೇಶ ಮಿಸ್ಕಿನ್ ತಿಳಿಸಿರುವುದಾಗಿ ಬೆಂಗಳೂರಿನ ಮಾಧ್ಯಮವೊಂದು ವರದಿ ಮಾಡಿದೆ.

ಸಿಟ್ ಗೌರಿ ಲಂಕೇಶ್ ತ್ಯೆಪ್ರಕರಣದ ತನಿಖೆ ನಡೆಸುತ್ತಿದ್ದರೆ,ಕಲಬುರ್ಗಿ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರು ನಡೆಸುತ್ತಿದ್ದಾರೆ. ಎರಡೂ ಕೊಲೆಗಳಿಗೆ ಒಂದೇ ಪಿಸ್ತೂಲನ್ನು ಬಳಸಲಾಗಿತ್ತು ಎನ್ನುವುದನ್ನು ಸಿಟ್ ಈಗಾಗಲೇ ರುಜುವಾತು ಮಾಡಿದೆ. ಕಲಬುರ್ಗಿಯವರನ್ನು 2015,ಆ.30 ಮತ್ತು ಗೌರಿ ಲಂಕೇಶ್ ಅವರನ್ನು 2017,ಸೆ.5ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ರೂವಾರಿ ಅಮೋಲ್ ಕಾಳೆ ಕಲಬುರ್ಗಿಯವರ ಹತ್ಯೆಯಲ್ಲಿಯೂ ಪ್ರಧಾನ ಪಾತ್ರಧಾರಿಗಳ ಪೈಕಿ ಓರ್ವನಾಗಿದ್ದ ಎನ್ನುವುದನ್ನು ಸಿಟ್ ತನಿಖೆಯು ಪತ್ತೆ ಹಚ್ಚಿದೆ ಎಂದೂ ಮಾಧ್ಯಮವು ತಿಳಿಸಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ 12 ಶಂಕಿತರ ಪೈಕಿ ಹೆಚ್ಚಿನವರು ತೀವ್ರಗಾಮಿ ಗುಂಪುಗಳಾದ ಹಿಂದು ಜನಜಾಗೃತಿ ಸಮಿತಿ (ಎಚ್‌ಜೆಎಸ್) ಅಥವಾ ಸನಾತನ ಸಂಸ್ಥಾಕ್ಕೆ ಸೇರಿದವರಾಗಿದ್ದಾರೆ. ಗೌರಿ ಲಂಕೇಶ್ ಮತ್ತು ಕಲಬುರ್ಗಿ ಹತ್ಯೆಗಳಲ್ಲದೆ ಕಮ್ಯುನಿಸ್ಟ್ ನಾಯಕ ಗೋವಿಂದ ಪನ್ಸಾರೆ ಮತ್ತು ವಿಚಾರವಾದಿ ನರೇಂದ್ರ ದಾಬೋಲ್ಕರ್ ಅವರ ಹತ್ಯೆ ಪ್ರಕರಣಗಳಲ್ಲಿಯೂ ಈ ಗುಂಪುಗಳಿಗೆ ಸೇರಿದವರು ಆರೋಪಿಗಳಾಗಿದ್ದಾರೆ. ಮಿಸ್ಕಿನ್‌ನ ತಪ್ಪೊಪ್ಪಿಗೆಯು ಇದನ್ನು ಸಮರ್ಥಿಸಿದೆ.

ಪ್ರಮುಖ ರೂವಾರಿ ಕಾಳೆ ಮತ್ತು ಗೋವಾದಲ್ಲಿನ ಎಚ್‌ಜೆಎಸ್ ಆಶ್ರಮದ ನಿವಾಸಿ ಅಮಿತ್ ದೆಗ್ವೇಕರ್ ಅವರು ಮಹಾರಾಷ್ಟ್ರದಲ್ಲಿ ನಡೆದ ಕೊಲೆಗಳಲ್ಲಿಯೂ ಭಾಗಿಯಾಗಿದ್ದರು ಎಂದು ಮಿಸ್ಕಿನ್ ತಿಳಿಸಿರುವುದಾಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಈ ಸುಳಿವುಗಳನ್ನು ಆಧರಿಸಿ ಸಿಟ್ ಮಹಾರಾಷ್ಟ್ರದಿಂದ ಇನ್ನೂ ಮೂವರನ್ನು ಶೀಘ್ರವೇ ಬಂಧಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News