×
Ad

ಕೆನೆಪದರಕ್ಕೆ ಕೋಟಾ ನಿರಾಕರಿಸಲು ಸಾಧ್ಯವಿಲ್ಲ: ಕೇಂದ್ರ

Update: 2018-08-16 20:50 IST

ಹೊಸದಿಲ್ಲಿ, ಆ.16: ಪರಿಶಿಷ್ಟ ಜಾತಿ/ಪಂಗಡದ ಜನರು ಈಗಲೂ ಜಾತಿ ಮತ್ತು ಹಿಂದುಳಿಯುವಿಕೆಯ ಕಳಂಕವನ್ನು ಎದುರಿಸುತ್ತಿರುವುದರಿಂದ ಸಮುದಾಯದ ಸರಕಾರಿ ಉದ್ಯೋಗಿಗಳ ಭಡ್ತಿಯಲ್ಲಿ ಮೀಸಲಾತಿಯನ್ನು ನಿರಾಕರಿಸಲು ಕೆನೆಪದರ ಪರಿಕಲ್ಪನೆಯನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಗುರುವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ತಿಳಿಸಿದೆ. ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತ್ತೃತ್ವದ ನ್ಯಾಯಾಲಯದ ಪಂಚಸದಸ್ಯ ಪೀಠದ ಮುಂದೆ ಮಾಹಿತಿ ನೀಡಿದ ಅಟರ್ನಿ ಜನರಲ್ ಕೆ.ಕೆ ವೇಣುಗೋಪಾಲ್, ಎಸ್‌ಸಿ/ಎಸ್ಟಿ ಸಮುದಾಯದ ಶ್ರೀಮಂತ ವ್ಯಕ್ತಿಗಳಿಗೆ ಕೆನೆಪದರ ಪರಿಕಲ್ಪನೆಯಡಿ ಕೋಟಾ ಲಾಭವನ್ನು ನಿರಾಕರಿಸಬಹುದು ಎಂದು ನ್ಯಾಯಾಲಯದ ಯಾವ ತೀರ್ಪಿನಲ್ಲೂ ತಿಳಿಸಲಾಗಿಲ್ಲ ಎಂದು ಹೇಳಿದ್ದಾರೆ.

ಕೆನೆಪದರ ಪರಿಕಲ್ಪನೆಯಡಿ ಎಸ್‌ಸಿ/ಎಸ್ಟಿ ಸಮುದಾಯಗಳಲ್ಲಿ ಅತ್ಯಂತ ಹಿಂದುಳಿದಿರುವ ಜನರಿಗೆ ಈ ಪ್ರಯೋಜನವನ್ನು ನೀಡಬೇಕು ಎಂದು ಮನವಿ ಮಾಡಿರುವ ಜನರನ್ನು ಕೋಟಾದಿಂದ ಹೊರಗಿರಿಸಬಹುದೇ ಎಂಬ ಪ್ರಶ್ನೆಗೆ ವೇಣುಗೋಪಾಲ್ ಈ ರೀತಿಯಾಗಿ ಉತ್ತರಿಸಿದರು. ಸಮುದಾಯದ ಬಹಳಷ್ಟು ಮಂದಿ ಹೀಗೆ ಮಾಡಲು ಮುಂದೆ ಬಂದಿದ್ದರೂ ಅವರು ಈಗಲೂ ಜಾತಿ ಮತ್ತು ಹಿಂದುಳಿಯುವಿಕೆಯ ಕರಿಛಾಯೆಯಿಂದ ಹೊರಗೆ ಬಂದಿಲ್ಲ ಎಂದು ಅಟರ್ನಿ ಜನರಲ್ ತಿಳಿಸಿದ್ದಾರೆ. ಎಸ್ಸಿ/ಎಸ್ಟಿ ಸಮುದಾಯದ ಜನರು ಈಗಲೂ ತಮ್ಮದೇ ಸಮುದಾಯದ ಒಳಗೆ ವಿವಾಹವಾಗಬೇಕಾಗಿದೆ. ಸಮುದಾಯದ ಶ್ರೀಮಂತ ವ್ಯಕ್ತಿಗಳು ಕೂಡಾ ಉನ್ನತ ಜಾತಿಯ ವ್ಯಕ್ತಿ ಜೊತೆ ವಿವಾಹವಾಗುವ ಹಾಗಿಲ್ಲ. ಸಮುದಾಯದ ಕೆಲವರು ಶ್ರೀಮಂತರಾಗಿದ್ದಾರೆ ಎಂಬ ಮಾತ್ರಕ್ಕೆ ಜಾತಿ ಮತ್ತು ಹಿಂದುಳಿಯುವಿಕೆಯ ಛಾಯೆ ಅವರನ್ನು ಬಿಟ್ಟುಹೋಗಿಲ್ಲ ಎಂದು ಅಟರ್ನಿ ಜನರಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News